
ಊಟದ ಜೊತೆ ಉಪ್ಪಿನಕಾಯಿ ಅನ್ನೋ ಮಾತೇ ಇದೆ. ದಕ್ಷಿಣ ಭಾರತದಲ್ಲಿ ಅದ್ರಲ್ಲೂ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬಳಸೋ ಟೊಮೆಟೋ ಉಪ್ಪಿನಕಾಯಿಯನ್ನು ಟೇಸ್ಟ್ ಮಾಡಿದ್ದೀರಾ? ಇಡ್ಲಿ, ದೋಸೆಗೆ ಇದು ಒಳ್ಳೆ ಕಾಂಬಿನೇಶನ್. ಬೇಳೆ ಸಾರು ಅನ್ನದ ಜೊತೆ ನಂಜಿಕೊಳ್ಳಲು ಸೂಪರ್ ಆಗಿರುತ್ತದೆ. ಚೆನ್ನಾಗಿ ಮಾಗಿರೋ ಟೊಮ್ಯಾಟೋ ಹಾಗೂ ಬೆಳ್ಳುಳ್ಳಿ ಹಾಕಿ ಈ ಉಪ್ಪಿನಕಾಯಿ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿ : 1 ಕೆಜಿ ಟೊಮೆಟೋ, ನೀರು, 50 ಗ್ರಾಂ ಹುಣಸೆ ಹಣ್ಣು, 4 ಚಮಚ ಖಾರದ ಪುಡಿ, 2 ಚಮಚ ಉಪ್ಪು, ಮುಕ್ಕಾಲು ಕಪ್ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆ, ಒಂದು ಗಡ್ಡೆ ಬೆಳ್ಳುಳ್ಳಿ, ಇಂಗು, ಕರಿಬೇವು.
ಮಾಡುವ ವಿಧಾನ : ಟೊಮ್ಯಾಟೋವನ್ನು ತೊಳೆದು ನೀರಿನಲ್ಲಿ 5 ನಿಮಿಷ ಬೇಯಿಸಿಕೊಳ್ಳಿ. ಸಂಪೂರ್ಣ ತಣ್ಣಗಾದ ಬಳಿಕ ಸಿಪ್ಪೆ ತೆಗೆದುಬಿಡಿ. ಅದನ್ನು ಹೆಚ್ಚಿಕೊಂಡು ಬಾಣೆಲೆಗೆ ಹಾಕಿ. ಅದಕ್ಕೆ 50 ಗ್ರಾಂ ಹುಣಸೆ ಹಣ್ಣನ್ನು ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಕುದಿಸಿ. ಈ ಮಿಶ್ರಣಕ್ಕೆ 4 ಚಮಚ ಖಾರದ ಪುಡಿ, 2 ಚಮಚ ಉಪ್ಪು ಹಾಕಿ ರುಬ್ಬಿಕೊಳ್ಳಿ.
ನಂತರ ಬಾಣೆಲೆಗೆ ಮುಕ್ಕಾಲು ಕಪ್ ಎಣ್ಣೆ ಹಾಕಿ. 1 ಚಮಚ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಅರ್ಧ ಚಮಚ ಜೀರಿಗೆ, 10 ಎಸಳು ಜಜ್ಜಿದ ಬೆಳ್ಳುಳ್ಳಿ, ಎರಡು ಕೆಂಪು ಮೆಣಸಿನಕಾಯಿ, ಇಂಗು, ಸ್ವಲ್ಪ ಕರಿಬೇವು ಹಾಕಿ ಒಗ್ಗರಣೆ ಮಾಡಿ.
ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿಕೊಂಡು 2 ನಿಮಿಷ ಸಣ್ಣ ಉರಿಯಲ್ಲಿಡಿ. ತಣ್ಣಗಾದ ಬಳಿಕ ಗಾಜಿನ ಜಾರಿನಲ್ಲಿ ಶೇಖರಿಸಿಡಿ. ಊಟದ ಜೊತೆಗೆ ರುಚಿಕರ ಟೊಮ್ಯಾಟೋ ಉಪ್ಪಿನಕಾಯಿ ಸವಿಯಿರಿ.