’’ಒಂದು ಫೋಟೊ ಸಾವಿರ ಪದಗಳಿಗೆ ಸಮ’’ ಎಂಬ ಮಾತಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಒಂದು ಫೋಟೊ ಸಾವಿರ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದೆ. ಹೀಗೆ ಸಾವಿರ ಗೊಂದಲಗಳನ್ನು ತಲೆಯೊಳಗೆ ಬಿಟ್ಟುಕೊಂಡು, ಹಲವು ಬಾರಿ ಯೋಚಿಸಿ, ತಲೆ ಕೆರೆದುಕೊಂಡು ಒಂದು ಉತ್ತರ ನೀಡಿದರೂ ಅದು ತಪ್ಪೇನೋ ಎಂದು ನಮಗೇ ಅನಿಸುತ್ತದೆ. ಮತ್ತೆ ತಲೆಯಲ್ಲಿ ಗೊಂದಲದ ಹುಳುಗಳು ಗುಂಯ್‌ಗುಡುತ್ತವೆ. ಮತ್ತೆ ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ.
ಹೀಗೆ ನೂರಾರು ಪ್ರಶ್ನೆಗಳನ್ನು ಸೃಷ್ಟಿಸುವ ಫೋಟೊವನ್ನು ಖ್ಯಾತ ವನ್ಯಜೀವಿ ಫೋಟೊಗ್ರಾಫರ್ ಬೆವೆರ್ಲಿ ಜೌಬರ್ಟ್ ಅವರು ತೆಗೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. 2018ರಲ್ಲಿ ಜೌಬರ್ಟ್ ಅವರು ಫೋಟೊ ತೆಗೆದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈಗಲೂ ಈ ಫೋಟೊ ಬಗ್ಗೆಯೇ ಚರ್ಚೆಯಾಗುತ್ತಿದೆ ಎಂದರೆ ಒಂದು ಫೋಟೊ ಮೂಡಿಸಿರುವ ಸಂಚಲನ ಎಂಥಾದ್ದು ಎಂಬುದನ್ನು ಅಂದಾಜಿಸಬಹುದು.
ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್
ಫೋಟೊದಲ್ಲಿರುವುದು ಇಷ್ಟೇ. ಹಲವಾರು ಝೀಬ್ರಾಗಳು ಮರುಭೂಮಿಯಲ್ಲಿ ನಡೆದುಕೊಂಡು ಹೋಗುವಾಗ ಜೌಬರ್ಟ್ ಫೋಟೊ ತೆಗೆದಿದ್ದಾರೆ. ಆಗ ಭಾರಿ ಬಿಸಿಲು ಇದ್ದ ಕಾರಣ ಫೋಟೊದಲ್ಲಿ ಝೀಬ್ರಾಗಳ ನೆರಳು ಎದ್ದು ಕಾಣಿಸಿದೆ. ಆದರೆ, ನೆರಳು ಕುದುರೆಗಳನ್ನು ಹೋಲುವುದರಿಂದ ಹಾಗೂ ಎಲ್ಲ ಝೀಬ್ರಾಗಳ ನೆರಳು ಸಹ ಕುದುರೆಗಳಿಗೇ ಹೋಲುತ್ತಿರುವುದರಿಂದ ಯಾರೇ ಆಗಲಿ ಫೋಟೊ ನೋಡಿದ ತಕ್ಷಣ ಇವು ಕುದುರೆಗಳಾ ಅಥವಾ ಝೀಬ್ರಾಗಳಾ ಎಂಬ ಗೊಂದಲ ಮೂಡುತ್ತದೆ. ಹೀಗೆ ಗೊಂದಲ ಮೂಡಿಸುವುದರಿಂದ ಫೋಟೊ ತೆಗೆದು 5 ವರ್ಷವಾದರೂ ಅದರ ಬಗ್ಗೆ ಚರ್ಚೆಯಾಗುತ್ತಿದೆ.