ವಿಶೇಷ ಸಭೆಯನ್ನು ಕರೆದಿದ್ದ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಆಡಳಿತ ಮಂಡಳಿಯು 2022ರ ಬೀಜಿಂಗ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಿಂದ ರಷ್ಯಾ ಹಾಗೂ ಬೆಲಾರಸ್ನ ಅಥ್ಲೀಟ್ಗಳಿಗೆ ಕೊಕ್ ನೀಡಿದೆ. ಅಂದರೆ ಈ ಎರಡು ದೇಶಗಳ ಪ್ಯಾರಾ ಅಥ್ಲೀಟ್ಗಳಿಗೆ ನಾಳೆಯಿಂದ ಆರಂಭಗೊಳ್ಳಲಿರುವ ಯಾವುದೇ ಗೇಮ್ಸ್ಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಇನ್ನು ಈ ವಿಚಾರವಾಗಿ ಮಾತನಾಡಿದ ಐಪಿಸಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ , ಕ್ರೀಡೆಯಲ್ಲಿ ರಾಜಕೀಯವನ್ನು ಮಿಶ್ರಣ ಮಾಡಬಾರದು ಎಂದು ನಾವು ನಂಬಿದ್ದೇವೆ. ಇಲ್ಲಿ ಯಾರದ್ದೂ ತಪ್ಪಿಲ್ಲವಾದರೂ ಸಹ ಯುದ್ಧವು ಈಗ ಕ್ರೀಡಾಕೂಟಕ್ಕೂ ಬಂದಿದೆ. ಹೀಗಾಗಿ ನಾವು ನಮ್ಮ ಸದಸ್ಯರ ಅಭಿಪ್ರಾಯಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು.
ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದಲೇ ನಾವು ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಪ್ಯಾರಾಲಿಂಪಿಕ್ ತತ್ವಗಳು ಹಾಗೂ ಮೌಲ್ಯಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್ ಸೇರಿದಂತೆ ಅನೇಕ ಕ್ರೀಡಾಕೂಟಗಳು ರದ್ದಾಗಿವೆ. ಚಾಂಪಿಯನ್ಸ್ ಲೀಗ್ ಫೈನಲ್ನ್ನೂ ರಷ್ಯಾದಿಂದ ಪ್ಯಾರಿಸ್ಗೆ ಸ್ಥಳಾಂತರಿಸಲಾಗಿದೆ.