ಕೇದಾರನಾಥದ ಪವಿತ್ರ ದ್ವಾರಗಳು ಭಕ್ತರಿಗಾಗಿ ಮೇ 6ರಂದು ಬೆಳಿಗ್ಗೆ 6.25ಕ್ಕೆ ತೆರೆಯಲಿವೆ. ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಓಂಕಾರೇಶ್ವರ ದೇವಸ್ಥಾನದಲ್ಲಿ ನಡೆದ ಸಂಕ್ಷಿಪ್ತ ಧಾರ್ಮಿಕ ಸಮಾರಂಭದ ಬಳಿಕ ಭಕ್ತರಿಗೆ ಈ ಶುಭ ಸುದ್ದಿ ನೀಡಲಾಯ್ತು.
ಈ ಸಂದರ್ಭದಲ್ಲಿ ಕೇದಾರನಾಥ ದೇವಾಲಯದ ಪ್ರಮುಖ ಅರ್ಚಕರಾದ ರಾವಲ್ ಭೀಮಾಶಂಕರ ಲಿಂಗ್ ಹಾಗೂ ಬದ್ರಿ ಕೇದಾರ ಮಂದಿರ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಕೂಡ ಉಪಸ್ಥಿತರಿದ್ದರು.
ಮೇ 6ರಂದು ವೃಶ್ಷಿಕ ಲಗ್ನದಲ್ಲಿ ಕೇದಾರನಾಥನ ಮಹಾದ್ವಾರಗಳನ್ನು ತೆರೆಯಲಾಗುವುದು. ಚಳಿಗಾಲದಲ್ಲಿ ಸಹ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತಿದ್ದವು. ಆದ್ರೆ ಈ ಪ್ರದೇಶದಲ್ಲಿ ತೀವ್ರ ಹಿಮಪಾತವಾಗುತ್ತಿರುವುದರಿಂದ ದೇವಾಲಯದ ದ್ವಾರವನ್ನು ಮುಚ್ಚಲಾಗಿತ್ತು.
ಮೇ 2 ರಿಂದ್ಲೇ ಕೇದಾರನಾಥದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಆರಂಭವಾಗಲಿವೆ. ಶಿವನ ಪಂಚಮುಖಿ ಮೂರ್ತಿಯನ್ನು ಮೇ 2 ರಂದು ಇಲ್ಲಿನ ಓಂಕಾರೇಶ್ವರ ದೇವಸ್ಥಾನದಿಂದ ಕೇದಾರನಾಥಕ್ಕೆ ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಗುತ್ತದೆ.