ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ತನ್ನ, ರಷ್ಯಾ ಮೂಲದ ಮಾಲೀಕನ ಐಷಾರಾಮಿ ಯಾಚ್ ಮುಳುಗಿಸಲು ಉಕ್ರೇನಿಯನ್ ಪ್ರಜೆ ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ. ಈ ವಿಚಾರವಾಗಿ ಉಕ್ರೇನ್ನ 55 ವರ್ಷದ ವ್ಯಕ್ತಿಯನ್ನು ಸ್ಪೇನ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಟಾರಸ್ ಒಸ್ಟಾಪ್ಚುಕ್ ಎಂದು ಗುರುತಿಸಲಾಗಿದೆ. ಈತ ಯಾಚ್ ಮುಳುಗಿಸಲು, ಅದರ ಇಂಜಿನ್ ಕೋಣೆಯಲ್ಲಿನ ಕವಾಟಗಳನ್ನು ತೆರೆದಿದ್ದಾನೆ ಎಂದು ತಿಳಿದುಬಂದಿದೆ. ಇದರಿಂದ ವಿಹಾರ ನೌಕೆಗೆ ಕೆಲವು ಗಮನಾರ್ಹ ಹಾನಿಗಳಾಗಿದೆ ಎನ್ನಲಾಗಿದೆ. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಪ್ರತೀಕಾರವಾಗಿ ತಾನು ಈ ಕೆಲಸ ಮಾಡಿದೆ ಎಂದು ಒಸ್ಟಾಪ್ಚುಕ್ ಹೇಳಿಕೊಂಡಿದ್ದಾನೆ.
Big News: ತಮಿಳುನಾಡಿನ ವಿಧುರಗಿರೀಶ್ವರ ದೇವಸ್ಥಾನದ ಮೇಲಿದ್ದ ಕಲಶ ನಾಪತ್ತೆ…!
ಲೇಡಿ ಅನಸ್ತೇಷಿಯಾ ಎಂಬ ಹೆಸರಿನ 150 ಅಡಿ ಇರುವ ಯಾಚ್ ರೋಸೊಬೊರೊನೆಕ್ಸ್ಪೋರ್ಟ್ನ ನಿರ್ದೇಶಕ ಅಲೆಕ್ಸಾಂಡರ್ ಮಿಖೀವ್ಗೆ ಸೇರಿದೆ. ಮಿಖೀವ್ ಅವರ ಕಂಪನಿಯು ಟ್ಯಾಂಕ್ಗಳು, ಯುದ್ಧ ವಾಹನಗಳು, ವಿಮಾನ, ಹಡಗು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ರಷ್ಯಾದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲು ಹೆಸರುವಾಸಿಯಾಗಿದೆ. ಅಂದಹಾಗೇ ಈ ನೌಕೆಯ ಬೆಲೆ 7.7 ಮಿಲಿಯನ್ ಡಾಲರ್ಗಳು, ಅಂದರೆ ಅಂದಾಜು 57 ಕೋಟಿ ರೂಪಾಯಿ.
ಘಟನೆಯ ಸಂಬಂಧ ಒಸ್ಟಾಪ್ಚುಕ್ ಅವರನ್ನು ಸ್ಪ್ಯಾನಿಷ್ ಸಿವಿಲ್ ಗಾರ್ಡ್ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಆದರೆ, ಬಳಿಕ ಜಾಮೀನಿನ ಮೇಲೆ ಒಸ್ಟಾಪ್ಚುಕ್ ಬಿಡುಗಡೆಯಾಗಿದ್ದಾರೆ. ಓಸ್ಟಾಪ್ಚುಕ್ ನೌಕೆಯನ್ನು ಮುಳುಗಿಸಲು ನಿರ್ಧರಿಸಿದಾಗ ಅದನ್ನು ಸ್ಪೇನ್ನ ಮಜೋರ್ಕಾದಲ್ಲಿ ರಕ್ಷಿಸಲಾಯಿತು ಎಂದು ತಿಳಿದು ಬಂದಿದೆ.