ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಸಮರ ಆರಂಭವಾಗಿದ್ದು, ಎರಡನೇ ದಿನವಾದ ಇಂದು ರಷ್ಯಾ ದಾಳಿ ಮುಂದುವರೆಸಿದೆ. ಯುದ್ಧದಿಂದಾಗಿ ಉಕ್ರೇನ್ ನಲ್ಲಿ ರಾಜ್ಯದ 91 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ 91 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಹಿತಿ ನೀಡಿದೆ. ಬೆಂಗಳೂರು 28, ಮೈಸೂರು 10, ಹಾಸನ 6, ಬಳ್ಳಾರಿ 5, ಬಾಗಲಕೋಟೆ 4, ಚಾಮರಾಜನಗರ 4 ವಿದ್ಯಾರ್ಥಿಗಳು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರಿನ ತಲಾ 3, ದಕ್ಷಿಣ ಕನ್ನಡ, ಹಾವೇರಿ, ಕೊಡಗಿನ ತಲಾ 3, ರಾಯಚೂರು, ಚಿತ್ರದುರ್ಗ, ದಾವಣಗೆರೆಯ ತಲಾ ಇಬ್ಬರು, ಧಾರವಾಡ, ಮಂಡ್ಯ, ಉಡುಪಿಯ ತಲಾ ಇಬ್ಬರು, ವಿಜಯಪುರದ ಇಬ್ಬರು, ಕೋಲಾರದ ಒಬ್ಬರು, ಶಿವಮೊಗ್ಗ, ಉತ್ತರ ಕನ್ನಡದ ತಲಾ ಒಬ್ಬರು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
BIG NEWS: ಬಂಕರ್ ನಲ್ಲಿ ಅಡಗಿ ಕುಳಿತ 700 ವಿದ್ಯಾರ್ಥಿಗಳು; ಸಹಾಯಕ್ಕಾಗಿ ಭಾರತದ ವಿದ್ಯಾರ್ಥಿನಿ ಮೊರೆ
ಇವರಲ್ಲಿ ಕೊಡಗಿನ ಅರ್ಜಿ ಗ್ರಾಮದ ಶಾರುಖ್ ಎಂಬ 21 ವರ್ಷದ ವಿದ್ಯಾರ್ಥಿ ಉಕ್ರೇನ್ ನಲ್ಲಿ ಅಪಾಯಕ್ಕೆ ಸಿಲುಕಿದ್ದು, ರಕ್ಷಣೆಗಾಗಿ ಮೆಟ್ರೋ ನೆಲಮಹಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ನಿನ್ನೆ ರಾತ್ರಿಯಿಂದ ವಿದ್ಯಾರ್ಥಿ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಯಾರ ಸಂಪರ್ಕಕ್ಕೂ ಸಿಗದಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಪ್ರಿಯಾ ಚಬ್ಬಿ, ಪ್ರೀತಿ ಚಬ್ಬಿ, ಶ್ರೇಯಾ ಹೆರಕಲ್, ಅಮೋಘ ಚೌಗಲಾ, ಪ್ರಿಯಾ ನಿಡಗುಂದಿ, ರಕ್ಷಿತ್ ಗಣಿ, ಅಫ್ರಿನ್ ಮುರಾದಾಬಾದ್ ಎಂಬ ವಿದ್ಯಾರ್ಥಿಗಳು ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದು, ರಾತ್ರಿಯಿಂದ ಊಟ, ನೀರು ಕೂಡ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.