ಬಾಲಿವುಡ್ ನಟಿ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಂಗೂಬಾಯಿ ಸಿನಿಮಾ ಇದೇ ಶುಕ್ರವಾರದಂದು ರಿಲೀಸ್ ಆಗಲಿದೆ.
ಆದರೆ ಇದಕ್ಕೂ ಮುನ್ನ ಗಂಗೂಬಾಯಿ ಸಿನಿಮಾದ ವಿರುದ್ಧ ಸಲ್ಲಿಕೆಯಾದ ಮೂರು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿದೆ.
ಸಿನಿಮಾದ ಟ್ರೇಲರ್ನಲ್ಲಿ ಬಳಕೆಯಾದ ‘ಚೀನಾ’ ಎಂಬ ಪದದ ವಿರುದ್ಧ ಅರ್ಜಿಯನ್ನು ಸಲ್ಲಿಸಲಾಗಿದೆ. ಸಿನಿಮಾದಲ್ಲಿ ದಂತ ವೈದ್ಯರ ಬಳಿ ತೆರಳುವ ಗಂಗೂಬಾಯಿ, ನೀವೇನು ಪೂರ್ತಿ ಚೀನಾವನ್ನು ನನ್ನ ಬಾಯಿಯೊಳಗೆ ಹಾಕುತ್ತೀರಾ..? ಎಂದು ಕೇಳುತ್ತಾಳೆ.
ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಿರುವ ವಕೀಲ ಅಶೋಕ್ ಸರಗಿ ದೇಶದ ಈಶಾನ್ಯ ಭಾಗದ ಜನರು ಚೀನಾದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮದೇ ಜನರ ಭಾವನೆಗಳಿಗೆ ಏಕೆ ನೋವುಂಟು ಮಾಡುತ್ತೀರಿ..? ಎಂದು ಕೇಳಿದ್ದಾರೆ. ಆದರೆ ಈ ಸಿನಿಮಾದ ಬಿಡುಗಡೆಗೆ ನನ್ನಿಂದ ಯಾವುದೇ ವಿರೋಧವಿಲ್ಲ ಎಂದಿದ್ದಾರೆ.
ಇದೊಂದು ಆಧಾರವಿಲ್ಲದ ವಾದವಾದ್ದರಿಂದ ಈ ಅರ್ಜಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ ರವಿ ಕದಂ ಹೇಳಿದ್ದಾರೆ.
ಈ ಪ್ರದೇಶವು ಸಾಂಪ್ರದಾಯಿಕ ಚೀನಿ ವೈದ್ಯರನ್ನು ಹೊಂದಿದೆ. ಇದಕ್ಕೂ ಈಶಾನ್ಯ ಭಾಗದ ನಿವಾಸಿಗಳಿಗೂ ಯಾವುದೇ ಸಂಬಂಧವಿಲ್ಲ. ಚೀನಾದ ವೈದ್ಯರ ಜೊತೆಯಲ್ಲಿ ದಂತ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿರುವ ದೃಶ್ಯವನ್ನು ತೋರಿಸಿದರೆ ಅದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಸಿನಿಮಾದಲ್ಲಿ ದಂತವೈದ್ಯರ ಬೋರ್ಡ್ನಲ್ಲಿ ಅವರು ಚೀನಾದ ವೈದ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಕಾಮಟಿಪುರದಲ್ಲಿ ಚೈನೀಸ್ ಸ್ಮಶಾನವಿದೆ. ವಾಸ್ತವದಲ್ಲಿ ಮುಂಬೈನ ಎರಡು ಹಳೆಯ ಚೈನೀಸ್ ರೆಸ್ಟಾರೆಂಟ್ಗಳಲ್ಲಿ ಒಂದು ಕಾಮಟಿಪುರದಲ್ಲಿತ್ತು. ಇವೆಲ್ಲ ಐತಿಹಾಸಿಕವಾಗಿ ಸಾಬೀತುಮಾಡಬಹುದಾದ ಸತ್ಯವಾಗಿದೆ. ಈ ಚಿತ್ರವು 1950ರ ದಶಕದ ಘಟನೆಗಳನ್ನು ಆಧರಿಸಿದೆ ಎಂದು ಕೋರ್ಟ್ ಮುಂದೆ ವಕೀಲ ರವಿ ಕದಂ ವಾದಿಸಿದ್ದಾರೆ.
ಅಲ್ಲದೇ ಈ ಸಿನಿಮಾವು ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಎಂಬ ಪುಸ್ತಕವನ್ನು ಆಧರಿಸಿದೆ. ಈ ಪುಸ್ತಕವನ್ನು ಎಸ್ ಹುಸೇನ್ ಜೈದಿ ಹಾಗೂ ಜೇನ್ ಬೋರ್ಗೆಸ್ ಬರೆದಿದ್ದಾರೆ ಎಂದು ಹೈಕೋರ್ಟ್ಗೆ ರವಿ ಕದಂ ಹೇಳಿದರು. ಮತ್ತೊಂದು ಅರ್ಜಿಯಲ್ಲಿ ಸಿನಿಮಾದಲ್ಲಿ ಕಥಿಯಾವಾಡಿ ಹಾಗೂ ಕಾಮಟಿಪುರ ಎಂಬ ಊರಿನ ಹೆಸರುಗಳನ್ನು ಬಳಕೆ ಮಾಡದಂತೆ ಕೋರ್ಟ್ ಆದೇಶ ನೀಡಬೇಕೆಂದು ಮನವಿ ಮಾಡಲಾಗಿದೆ.
ಈ ಅರ್ಜಿದಾರರು ಪ್ರಚಾರದ ಆಸೆಗಾಗಿ ಗಂಗೂಬಾಯಿ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಇಂತವರಿಗೆ ಭಾರೀ ದಂಡವನ್ನು ವಿಧಿಸಬೇಕು ಎಂದು ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ ರವಿ ಕದಂ ಆಗ್ರಹಿಸಿದ್ದಾರೆ.