ವಿಶ್ವದ್ಯಾಂತ ಪ್ರತಿ ನಾಲ್ವರಲ್ಲಿ ಮೂವರು ಒಂದೇ ಬಾರಿ ಬಳಕೆ ಮಾಡಿ ಬಿಸಾಡುವಂತಹ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಆದಷ್ಟು ಬೇಗ ನಿಲ್ಲಿಸಬೇಕಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಜಾಗತಿಕ ಒಪ್ಪಂದವೊಂದನ್ನು ಕೈಗೊಳ್ಳುವ ಬಗ್ಗೆ ಮಾತುಕತೆಯನ್ನು ನಡೆಸಲು ತಯಾರಿ ನಡೆಸುತ್ತಿದೆ.
2015 ರಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಪ್ಯಾರಿಸ್ ಒಪ್ಪಂದದ ನಂತರದ ಪ್ರಮುಖ ಪರಿಸರ ಒಪ್ಪಂದ ಎಂದು ಹೇಳಲಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಮಹತ್ವಾಕಾಂಕ್ಷೆಯ ಒಪ್ಪಂದದೊಂದಿಗೆ ಮುಂದುವರಿಯಲು ಈ ತಿಂಗಳು ನೈರೋಬಿಯಲ್ಲಿ ಸಭೆ ನಡೆಸುವ ಮೂಲಕ ವಿವಿಧ ದೇಶಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಬಹುದು ಎಂದು ತಿಳಿದುಬಂದಿದೆ.
ಸಮೀಕ್ಷೆಗೆ ಒಳಪಟ್ಟವರ ಪೈಕಿ 90 ಪ್ರತಿಶತದಷ್ಟು ಜನರು ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಆದರೆ ಈ ಅಭಿಪ್ರಾಯವು ತ್ಯಾಜ್ಯ ಸಂಗ್ರಹಣೆ ಹಾಗೂ ಮರುಬಳಕೆಯ ಮೇಲೆ ಕೇಂದ್ರೀಕರಿಸುತ್ತದೆಯೇ ಅಥವಾ ಬಳಕೆ ಮಾಡಿ ಬಿಸಾಡುವ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವಿಶ್ವಸಂಸ್ಥೆಯು ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸುವಂತಹ ಒಪ್ಪಂದವನ್ನು ಕೈಗೊಳ್ಳಲು ಸಾಧ್ಯವಾಗದೇ ಇದ್ದರೆ ಮುಂಬರುವ ದಿನಗಳಲ್ಲಿ ಪರಿಸರಕ್ಕೆ ವ್ಯಾಪಕವಾದ ಹಾನಿ ಉಂಟಾಗುತ್ತದೆ. ಕೆಲವು ಸಮುದ್ರದ ಪ್ರಬೇಧಗಳು ಸಂಪೂರ್ಣ ಅಳಿವಿನ ಅಂಚಿಗೆ ಸಾಗುತ್ತಿದೆ. ಹವಳದ ಬಂಡೆಗಳು ಹಾಗೂ ಮ್ಯಾಂಗ್ರೋವ್ನಂಹ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಡಬ್ಲುಡಬ್ಲುಎಫ್ ಅಧ್ಯಯನವು ಹೇಳಿದೆ.