ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂಬ ಕೇಂದ್ರ ಸಚಿವ ನಾರಾಯಣ್ ರಾಣೆ ಹೇಳಿಕೆ ವಿರುದ್ಧ ಮುಂಬೈನ ಮೇಯರ್ ಕಿಶೋರಿ ಪೆಡ್ನೇಕರ್ ತೀವ್ರ ವಾಗ್ದಾಳಿ ನಡೆಸಿದರು. ಪೆಡ್ನೇಕರ್ ದಿಶಾ ಸಾಲಿಯಾನ್ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಸಾಲಿಯಾನ್ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಮೇಯರ್ ಕಿಶೋರಿ ಪೆಡ್ನೇಕರ್, ರಾಣೆ ಹೇಳಿಕೆಯು ಅವಮಾನಕಾರಿಯಾಗಿದೆ ಹಾಗೂ ದಿಶಾ ಸಾಲಿಯಾನ್ರ ಚಾರಿತ್ರ್ಯಕ್ಕೆ ಭಂಗ ತರುವಂತಿದೆ. ರಾಣೆಯ ಹೇಳಿಕೆಗಳಿಂದ ತಮಗೆ ನೋವಾಗಿದೆ ಎಂದು ಸಾಲಿಯಾನ್ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗವು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಕೋರಿದ್ದೇನೆ ಎಂದು ಪೆಡ್ನೇಕರ್ ಹೇಳಿದರು.
ಕೆಲವು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ನಾರಾಯಣ್ ರಾಣೆ, ಸುಶಾಂತ್ ಸಿಂಗ್ ರಜಪೂತ್ ಹಾಗೂ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ರ ಹತ್ಯೆಗೆ ಒಂದೇ ಕುಟುಂಬ ಕಾರಣವಾಗಿದೆ. ದಿಶಾರ ಮೇಲೆ ಸಾಮೂಹಿಕ ಅತ್ಯಾಚಾರಗೈದು ಬಳಿಕ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದರು.