ಪಶ್ಚಿಮ ಬಂಗಾಳದ ಕಡಲೆಕಾಯಿ ವ್ಯಾಪಾರಿ ಭುವನ್ ಬಡ್ಯಾಕರ್ ಹಾಡಿದ ಒಂದೇ ಒಂದು ಹಾಡು ಸೋಶಿಯಲ್ ಮೀಡಿಯಾದಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸಿತು ಅಂದರೆ ಈ ಹಾಡು ಇದೀಗ ಯುವಜನತೆಯ ಬಾಯಲ್ಲಿ ಗುನುಗುತ್ತಿದೆ. ಯೆಸ್..! ಕಚ್ಚಾ ಬಾದಾಮ್ ಎಂಬ ಹಾಡಿನ ಮೂಲಕ ಭುವನ್ ಬಡ್ಯಾಕರ್ ಕಡಲೆಕಾಯಿ ಮಾರಾಟದಿಂದ ಇದೀಗ ಕೋಲ್ಕತ್ತಾದ ನೈಟ್ ಕ್ಲಬ್ನಲ್ಲಿ ಲೈವ್ ಪ್ರದರ್ಶನ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.
ನಿಮ್ಮೆಲ್ಲರ ಜೊತೆ ಇಲ್ಲಿರಲು ನನಗೆ ತುಂಬಾನೇ ಸಂತೋಷವಾಗುತ್ತಿದೆ ಎಂದು ಕೋಲ್ಕತ್ತಾದ ನೈಟ್ ಕ್ಲಬ್ನಲ್ಲಿ ಭುವನ್ ಬಡ್ಯಾಕರ್ ಹೇಳಿದ್ದಾರೆ. ಹೊಳೆಯುವ ಜಾಕೆಟ್ ಧರಿಸಿದ್ದ ಭುವನ್, ಕಚ್ಚಾ ಬಾದಾಮ್ ಹಾಡನ್ನು ಹಾಡಿದ್ದು ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.
ಇದೇ ಮೂರು ತಿಂಗಳ ಹಿಂದೆ ಕಡಲೆಕಾಯಿ ಮಾರುತ್ತಾ ಕುಟುಂಬಕ್ಕೆ ಒಂದೊತ್ತಿನ ಊಟವನ್ನು ಹೊಂದಿಸಲು ಪರದಾಡುತ್ತಿದ್ದ ಭುವನ್ ಬಡ್ಯಾಕರ್ರ ಜೀವನವೇ ಇದೀಗ ಬದಲಾಗಿ ಹೋಗಿದೆ. ಕಳೆದ ವಾರವಷ್ಟೇ ಮ್ಯೂಸಿಕ್ ಕಂಪನಿಯೊಂದು ಇವರಿಗೆ 1.5 ಲಕ್ಷ ರೂಪಾಯಿ ಮೌಲ್ಯದ ಚೆಕ್ ನೀಡಿದೆ.
ಇದು ಮಾತ್ರವಲ್ಲದೇ ಭುವನ್ ಬಂಗಾಳಿಯ ಪ್ರಸಿದ್ಧ ಟಿವಿ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮವನ್ನು ಸ್ವತಃ ಸೌರವ್ ಗಂಗೂಲಿ ನಡೆಸಿಕೊಟ್ಟಿದ್ದರು..!
ನಾನೀಗ ಕಡಲೆಕಾಯಿ ವ್ಯಾಪಾರ ಮಾಡುವುದನ್ನೇ ಬಿಟ್ಟಿದ್ದೇನೆ. ನನ್ನ ನೆರೆಹೊರೆಯವರು ನೀವು ಕಡಲೆಕಾಯಿ ವ್ಯಾಪಾರಕ್ಕೆ ಹೋಗಬೇಡಿ. ಇಲ್ಲವಾದಲ್ಲಿ ನಿಮ್ಮನ್ನು ಯಾರಾದರೂ ಕಿಡ್ನಾಪ್ ಮಾಡಿಬಿಟ್ಟಾರು ಎಂದು ಹೇಳುತ್ತಾರೆ ಅಂತಾ ಭುಬನ್ ಹೇಳಿದ್ದಾರೆ.