ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಕಾರ್ಡಿಯಾಕ್ ಅರೆಸ್ಟ್ ಗೆ ಯುವ ಜನತೆ ಬಲಿಯಾಗ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡ ಜೊತೆಗೆ ದೈಹಿಕ ಚಟುವಟಿಕೆಗಳ ಕೊರತೆ ಅಂತಾರೆ ವೈದ್ಯರು.
ಸಂಶೋಧನೆಯಲ್ಲಿ ಬಹಿರಂಗವಾಗಿರೋ ಮತ್ತೊಂದು ಆಘಾತಕಾರಿ ಅಂಶವೆಂದ್ರೆ ಚಳಿಗಾಲದಲ್ಲೇ ಹೃದಯಾಘಾತದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದಕ್ಕೆ ನಿಖರವಾದ ಕಾರಣ ಏನು ಅನ್ನೋದನ್ನು ಕೂಡ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಚಳಿಗಾಲದಲ್ಲಿ ನಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ.
ಇದರಿಂದಾಗಿ ರಕ್ತದೊತ್ತಡ ಹೆಚ್ಚಾಗುತ್ತವೆ. ಪರಿಣಾಮ ಸ್ಟ್ರೋಕ್ ಮತ್ತು ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ಚಳಿಗಾಲದಲ್ಲಿ ದೇಹದ ಉಷ್ಣತೆ ಕಾಪಾಡಿಕೊಳ್ಳಲು ಹೃದಯ ಹೆಚ್ಚುವರಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದ್ರೆ ತಂಪಾದ ಗಾಳಿ ಬೀಸುವುದರಿಂದ ದೇಹದ ಉಷ್ಣತೆ ಕಾಪಾಡಿಕೊಳ್ಳೋದು ಕಷ್ಟವಾಗುತ್ತದೆ. ದೇಹದ ಉಷ್ಣತೆ 95 ಡಿಗ್ರಿಗಿಂತ ಕಡಿಮೆಯಾದ್ರೆ ಅದು ಹೃದಯದ ಸ್ನಾಯುಗಳಿಗೆ ಹಾನಿ ಮಾಡುತ್ತದೆ. ಪರಿಣಾಮ ಚಳಿಗಾಲದಲ್ಲಿ ಬೆಳಗಿನ ಜಾವದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹಾಲಿಡೇ ಸಮಯವಾಗಿದ್ದರಿಂದ ಜನರಲ್ಲಿ ಒತ್ತಡ ಅಧಿಕವಾಗಿರುವುದು ಕೂಡ ಪ್ರಮುಖ ಕಾರಣ ಎನ್ನುತ್ತಾರೆ ವೈದ್ಯರು. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿ. ಮಾದಕ ದ್ರವ್ಯಗಳ ಸೇವನೆ ಕಡಿಮೆ ಮಾಡುವುದು, ಆಗಾಗ ಕೈತೊಳೆದುಕೊಳ್ಳುವ ಮೂಲಕ ಉಸಿರಾಟಕ್ಕೆ ಸಂಬಂಧಪಟ್ಟ ಸೋಂಕನ್ನು ತಡೆದರೆ ನಿಮ್ಮ ಹೃದಯ ಸುರಕ್ಷಿತವಾಗಿರಲಿದೆ ಅನ್ನೋದು ವೈದ್ಯರ ಅಭಯ.