ಬೆಂಗಳೂರು: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ತಿರುಗೇಟು ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮುಂದೆ ರಾಜ್ಯದಲ್ಲಿ ಏನಾಗಲಿದೆ ಎಂಬುದಕ್ಕೆ ಇದು ಟ್ರಯಲ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಭಜರಂಗದಳ ಕಾರ್ಯಕರ್ತನ ಹತ್ಯೆ ಹಿಂದಿನ ಉದ್ದೇಶವೇನು ಎಂದು ಗೊತ್ತಾಗಬೇಕು. ಇನ್ನೊಂದು ವಾರ ಮೃತ ಯುವಕನ ಮನೆಗೆ ರಾಜಕಾರಣಿಗಳು ಭೇಟಿ ನೀಡುತ್ತಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮೊಸಳೆ ಕಣ್ಣೀರು ಸುರಿಸ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಅಹಿತಕರ ಘಟನೆ ನಡೆದಿತ್ತು. ಆಗ ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪಿಸಿತ್ತು. ಅವರ ಆರೋಪದಲ್ಲಿ ಕೆಲವೊಂದು ಸತ್ಯವೂ ಇದೆ. ನಿನ್ನೆ ನಡೆದ ಘಟನೆ ಹಿಂದಿನ ಉದ್ದೇಶವೇನೆಂಬುದು ತಿಳಿಯಬೇಕು ಎಂದು ಆಗ್ರಹಿಸಿದರು.
ಶಿವಾಜಿ ಜಯಂತಿ ಪ್ರಯುಕ್ತ ವಿಶೇಷ ಪೋಸ್ಟ್ ಕಾರ್ಡ್ಗಳ ಬಿಡುಗಡೆ
ಎರಡು ವರ್ಷಗಳ ಹಿಂದೆಯೇ ಮೃತ ಹರ್ಷ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಕೊಲೆ ಮಾಡಿದರೆ 10 ಲಕ್ಷ ಕೊಡುವುದಾಗಿ ಘೋಷಿಸಿದ್ದರು ಎಂದು ಹರ್ಷನ ಸಂಬಂಧಿಯೊಬ್ಬರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ಇರಲಿಲ್ಲವೇ? ನಿಮ್ಮ ಪಕ್ಷಕ್ಕೆ ಬೆಂಬಲ ನೀಡುವ ಸದಸ್ಯನಿಗೆ ರಕ್ಷಣೆ ನೀಡಿಲ್ಲ. ಇನ್ನು ನೀವು ಈ ರಾಜ್ಯದ ಜನರಿಗೆ ಹೇಗೆ ರಕ್ಷಣೆ ಕೊಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಮುಂದೆ ಈ ರಾಜ್ಯದಲ್ಲಿ ಏನಾಗುತ್ತೆ ಎಂಬುದಕ್ಕೆ ಇದು ಟ್ರಯಲ್ ಆಗಲಿದೆಯಾ ಎಂಬ ಅನುಮಾನ ಕಾಡುತ್ತಿದೆ. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.