‘ಹಿಂದಿ ರಾಷ್ಟ್ರ ಭಾಷೆ’ ಎಂದು ಅವಲೋಕಿಸಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ತೆಲುಗು ಭಾಷಿಕ ಆರೋಪಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಆರೋಪಿಯ ಶಾಸನಬದ್ಧ ಹಕ್ಕುಗಳ ಕುರಿತಾದ ವಿವರಣೆ ರಾಷ್ಟ್ರಭಾಷೆ ಹಿಂದಿಯಲ್ಲಿತ್ತೆಂದು ಗಮನಿಸಿದ ಬಾಂಬೆ ಹೈಕೋರ್ಟ್, ಮೇಲ್ಮನವಿದಾರ ಗಂಗಮ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಜಾಮೀನು ನಿರಾಕರಿಸಿತ್ತು.
2019ರಲ್ಲಿ ಟೂರ್ಸ್ ಮತ್ತು ಟ್ರಾವೆಲ್ ಕಂಪನಿಯ ಮಾಲೀಕರಾಗಿರುವ ಹೈದರಾಬಾದ್ ನಿವಾಸಿ ರೆಡ್ಡಿ ಅವರ ಬಳಿ ವಾಣಿಜ್ಯ ಬಳಕೆ ಪ್ರಮಾಣದ ಮಾದಕ ವಸ್ತು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರನಿಗೆ ರಾಷ್ಟ್ರೀಯ ಭಾಷೆಯಾದ ಹಿಂದಿಯಲ್ಲಿ ತನ್ನ ಹಕ್ಕಿನ ಬಗ್ಗೆ ತಿಳಿಸಲಾಗಿದೆ. ಅರ್ಜಿದಾರರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅರ್ಜಿದಾರರು ಟೂರ್ಸ್ ಮತ್ತು ಟ್ರಾವೆಲ್ ವ್ಯವಹಾರ ನಡೆಸುತ್ತಿದ್ದರು ಎಂಬ ಅಂಶವನ್ನು ಗಮನಿಸಿದ ಕೋರ್ಟ್, ಅವರು ಈ ಹಂತದಲ್ಲಿ ಸ್ಥಳೀಯ ಭೂ ಪ್ರದೇಶ ಮತ್ತು ಅಲ್ಲಿನ ಭಾಷೆ ಬಗ್ಗೆ ತಿಳಿದಿದ್ದಾರೆ ಎಂದು ನಂಬಲು ನ್ಯಾಯಾಲಯವನ್ನು ಪ್ರೇರೇಪಿಸುತ್ತದೆ ಎಂದು ಆಬಿಪ್ರಾಯ ವ್ಯಕ್ತಪಡಿಸಿದೆ. ಈ ಹಂತದಲ್ಲಿ ಎನ್‌ಡಿಪಿಎಸ್ ಕಾಯಿದೆಯ ಸೆಕ್ಷನ್ 50 ರ ಅಡಿಯಲ್ಲಿ ಅರ್ಜಿದಾರರ ಹಕ್ಕನ್ನು ತಿಳಿಸಲಾದ ಹಿಂದಿ ಭಾಷೆ ಬಗ್ಗೆ ಅವರಿಗೆ ಅರಿವಿತ್ತು ಎಂದು ಭಾವಿಸಬಹುದು ಎಂದು ಹೇಳಿದ ಹೈಕೋರ್ಟ್, ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ELECTION BREAKING: ಮತದಾನದ ಗೌಪ್ಯತೆ ಉಲ್ಲಂಘಿಸಿದ ಕಾನ್ಪುರ ಮೇಯರ್ ಗೆ ಬಿಗ್ ಶಾಕ್: FIR ದಾಖಲು
ಈ ತೀರ್ಪನ್ನು ಪ್ರಶ್ನಿಸಿ, ತಾನು ತೆಲುಗು ಭಾಷೆಯನ್ನಷ್ಟೇ ಬಲ್ಲವನಾಗಿದ್ದರೂ ಅಧಿಕಾರಿಗಳು ತನ್ನ ಶಾಸನಬದ್ಧ ಹಕ್ಕುಗಳ ಬಗ್ಗೆ ಹಿಂದಿಯಲ್ಲಿ ತಿಳಿಸಿರುವುದರಿಂದ ಜಾಮೀನು ನೀಡುವಂತೆ ಆರೋಪಿ ಸುಪ್ರೀಂ ಕೋರ್ಟ್‌ನಲ್ಲಿ ಕೋರಿದ್ದಾರೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂಬುದನ್ನು ಗ್ರಹಿಸಲು ಹೈಕೋರ್ಟ್ ವಿಫಲವಾಗಿದೆ. ತನ್ನನ್ನು ಬಂಧಿಸಿದ್ದೇಕೆ ಎಂಬ ವಿವರಗಳನ್ನು ತನಗೆ ತಿಳಿಸಿಲ್ಲ. ಬಂಧನಕ್ಕೆ ಕಾರಣಗಳನ್ನು ತಿಳಿಸದೇ ಇದ್ದಾಗ ಆರೋಪಿಯ ಮೂಲಭೂತ ಮತ್ತು ಶಾಸನಬದ್ಧ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆರೋಪ ಪಟ್ಟಿ ಸಲ್ಲಿಸಲಾಗಿದ್ದರೂ ಆರೋಪಿಗಳು 2 ವರ್ಷಗಳಿಂದ ಕಸ್ಟಡಿಯಲ್ಲಿದ್ದಾರೆ. ಆರೋಪಗಳನ್ನು ಇನ್ನಷ್ಟೇ ನಿಗದಿಪಡಿಸಬೇಕಿದ್ದು ಇನ್ನೂ ವಿಚಾರಣೆ ಆರಂಭವಾಗಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಯ ಪರ ವಕೀಲ ತಿಳಿಸಿದ್ದಾರೆ.