ಒಬ್ಬ ಸಂಗಾತಿಯಾಗಿ, ಪೋಷಕನಾಗಿ ಅತ್ಯದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಒಲಿಂಪಿಕ್ಸ್ ಪದಕ ವಿಜೇತೆ ಮೇರಿ ಕೋಮ್ ಪತಿ ಕೆ. ಒಂಕೋಲರ್ ಮಣಿಪುರದ ಸೈಕೋಟ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಒಂಕೋಲರ್ ತಮ್ಮ ಚುನಾವಣಾ ಚಿಹ್ನೆಯಾಗಿ ಟಾರ್ಚ್ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೇರಿ ಕೋಮ್ರ ಪತಿಯ ಈ ಹೊಸ ಪ್ರಯತ್ನಕ್ಕೆ ಗ್ರಾಮಸ್ಥರು ಅಭೂತಪೂರ್ವ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಸಿಯಾಲ್ಕೋಟದಿಂದ ಸಮುಲ್ಲಮನ್ ಗ್ರಾಮಕ್ಕೆ ಸಾಗುವ ಮಾರ್ಗ ಮಧ್ಯದಲ್ಲಿ ಒಂಕೋಲರ್ರ ಬೆಂಬಲ ಸೂಚಿಸುವ ಸಾಕಷ್ಟು ಬ್ಯಾನರ್ಗಳನ್ನು ಅಂಟಿಸಲಾಗಿದೆ.
ನಮ್ಮ ಗ್ರಾಮವು ಮೇರಿ ಕೋಮ್ ಗ್ರಾಮ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ನಮ್ಮ ಗ್ರಾಮಕ್ಕೆ ಅಭಿವೃದ್ಧಿಯ ಅವಶ್ಯಕತೆ ಇದೆ. ಮೇರಿ ಕೋಮ್ ಸಂಸದರಾದ ಬಳಿಕ ನಮ್ಮ ಗ್ರಾಮದಲ್ಲಿ ಕೆಲವು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಇನ್ನೂ ಹೆಚ್ಚಿನ ಅಭಿವೃದ್ಧಿಯ ಅಗತ್ಯವಿದೆ. ಇದಕ್ಕಾಗಿಯೇ ನಾವು ಒಂಕೋಲರ್ರನ್ನು ವಿಧಾನಸಭಾ ಚುನಾವಣೆಯ ಕಣಕ್ಕಿಳಿಸುತ್ತಿದ್ದೇವೆ ಎಂದು ಸ್ಥಳೀಯ ಅಸಾಂಗ್ ಲಾಂಗ್ ಎಂಬವರು ಹೇಳಿದರು.
ಮೇರಿ ಕೋಮ್ ಗೆದ್ದಾಗ ನಾವು ಆನಂದಿಸಿದ್ದೇವೆ. ಸೋತಾಗ ದುಃಖಪಟ್ಟಿದ್ದೇವೆ. ಈ ಬಾರಿ ಒಂಕೋಲರ್ ಗೆಲ್ಲಬೇಕೆಂದು ಆಶಿಸುತ್ತಿದ್ದೇವೆ. ಇಬ್ಬರ ವಿಚಾರವಾಗಿಯೂ ನಾವು ಹೆಮ್ಮೆ ಪಡುವಂತಾಗಬೇಕು. ನಮ್ಮ ಗ್ರಾಮಕ್ಕೆ ಇನ್ನಷ್ಟು ಅಭಿವೃದ್ಧಿಯ ಅವಶ್ಯಕತೆ ಇದೆ ಎಂದು ಮತ್ತೊಬ್ಬ ಗ್ರಾಮಸ್ಥ ಕ್ರಿಸ್ಟಿನಾ ಎಂಬವರು ಹೇಳಿದರು.
ಇನ್ನು ಈ ವಿಚಾರವಾಗಿ ಮಾತನಾಡಿದ ಮೇರಿಕೋಮ್ ಪತಿ ಒಂಕೋಲರ್, ನಾವು ಯಾವುದೇ ರೀತಿಯಲ್ಲಾದರೂ ಜನರಿಗಾಗಿ ಕೆಲಸ ಮಾಡಬೇಕೆಂದು ಬಯಸುತ್ತೇನೆ. ಈ ಬಾರಿ ಕೂಡ ನನಗೆ ಜನರೇ ಒತ್ತಾಯ ಮಾಡಿ ಕಣಕ್ಕಿಳಿಸಿದ್ದಾರೆ. ನಾನು ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಗಬಹುದಾ ಎಂದು ಯತ್ನಿಸಿದೆ. ಆದರೆ ಯಾರೂ ನನಗೆ ಪಕ್ಷದಿಂದ ಟಿಕೆಟ್ ನೀಡಲಿಲ್ಲ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದು ಹೇಳಿದರು.
ಇನ್ನು ಚುನಾವಣೆಗೆ ಸ್ಪರ್ಧಿಸಲು ಪತ್ನಿಯ ಬೆಂಬಲ ಹೇಗಿದೆ ಎಂಬ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಮೇರಿಕೋಮ್ ಕೂಡ ಸಂಸದೆಯಾಗಿರುವುದರಿಂದ ಅವರಿಗೆ ನನಗೆ ನೇರವಾಗಿ ಬೆಂಬಲ ನೀಡಲು ಸಾಧ್ಯವಾಗೋದಿಲ್ಲ. ಆದರೆ ಪರೋಕ್ಷವಾಗಿ ಮೇರಿ ಕೋಂ ಬೆಂಬಲ ನನಗಿದೆ. ನನ್ನ ಪ್ರತಿಯೊಂದು ಹೆಜ್ಜೆಗೂ ಅವರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.