ದೇಶದ ಅತ್ಯಂತ ಸಿರಿವಂತ ದೇವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಆಗಮಿಸುತ್ತಾರೆ. ಇದೀಗ ತಿರುಮಲ ತಿರುಪತಿ ದೇವಸ್ಥಾನಂ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣ ಸಂಗ್ರಹಿಸಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ‘ಉದಯಾಸ್ತಮಾನ’ ಸೇವೆ ಟಿಕೆಟ್ ಗಳ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ 1.5 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಅಭಿಷೇಕ ಸೇರಿದಂತೆ ಹಲವು ಸೇವೆಗಳು ಒಳಗೊಂಡಿದೆ ಎಂದು ಹೇಳಲಾಗಿದೆ.
ಈ ಟಿಕೆಟ್ ಪಡೆದ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನು ವೀಕ್ಷಿಸಲು ಜೊತೆಗೆ ಗರ್ಭಗುಡಿ ಸೇರಿದಂತೆ ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅವಕಾಶ ಸಿಗುತ್ತದೆ.
ಈ ಟಿಕೆಟ್ ಪಡೆದ ಭಕ್ತರು 25 ವರ್ಷಗಳವರೆಗೆ ಪ್ರತಿ ವರ್ಷ ಒಂದು ನಿಗದಿತ ದಿನದಂದು ಭೇಟಿ ನೀಡಬಹುದಾಗಿದ್ದು, ಕಂಪನಿ ಅಥವಾ ಸಂಸ್ಥೆಗಳು ಟಿಕೆಟ್ ಪಡೆದಿದ್ದರೆ ಅದರ ಸಿಂಧುತ್ವದ ಅವಧಿ 20 ವರ್ಷಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಟಿಟಿಡಿ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.