ಕಳೆದ ವರ್ಷ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯ ಬೈಪಾಸ್ನ ಕುಂಡ್ಲಿ -ಮನೇಸರ್ – ಪಲ್ವಾಲ್ ಎಕ್ಸ್ಪ್ರೆಸ್ ವೇನಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಟ್ರಕ್ನ ಹಿಂಭಾಗಕ್ಕೆ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು ಗುದ್ದಿರುವುದನ್ನು ಕಾಣಬಹುದಾಗಿದೆ.
ನಟ ದೀಪ್ ಸಿಧು ದೆಹಲಿಯಿಂದ ಪಂಜಾಬ್ನ ಭಟಿಂಡಾಗೆ ಸ್ಕಾರ್ಪಿಯೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ನಿನ್ನೆ ರಾತ್ರಿ 9:30ರ ಸುಮಾರಿಗೆ ಟ್ರಕ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಧುವನ್ನು ಆಸ್ಪತ್ರೆಗೆ ತರುವ ವೇಳೆಯಲ್ಲಿಯೇ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.
ಪಂಜಾಬಿ ನಟ ದೀಪ್ ಸಿಧು ಕಳೆದ ವರ್ಷ ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ವೇಳೆ ಕೆಂಪು ಕೋಟೆ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪ್ರತಿಭಟನಾಕಾರರು ಕೆಂಪುಕೋಟೆಗೆ ನುಗ್ಗಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಈ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಿಧುವನ್ನು ಬಂಧಿಸಿದ್ದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಹಿಂಪಡೆದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು.