ಹಾಡಹಗಲೇ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಕ್ರೌರ್ಯ ಮೆರೆಯುತ್ತಿರೋದನ್ನು ಕಾಣಬಹುದಾಗಿದೆ. ಪಂಚರಾಜ್ಯ ವಿಧಾನಸಭಾ ಚುನಾವಣೆಯ ನಡುವೆಯೇ ಉತ್ತರ ಪ್ರದೇಶದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂಬ ವದಂತಿಯು ಟ್ವಿಟರ್ನಲ್ಲಿ ಹರಿದಾಡುತ್ತಿದೆ.
ಆದರೆ ಫ್ಯಾಕ್ಟ್ ಚೆಕ್ನಲ್ಲಿ ಇದೊಂದು ಸುಳ್ಳು ಮಾಹಿತಿ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ತೆಲಂಗಾಣದ ಜಂಗಾವ್ ಜಿಲ್ಲೆಯಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ಬಿಜೆಪಿ ಕಾರ್ಯಕರ್ತರು ಆಡಳಿತಾರೂಢ ಟಿಆರ್ಎಸ್ ಕಾರ್ಯಕರ್ತರ ಜೊತೆಯಲ್ಲಿ ಜಟಾಪಟಿ ನಡೆಸಿದ್ದಾರೆ. ಈ ವಿಡಿಯೋಗೂ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂಬ ವಿಚಾರ ಫ್ಯಾಕ್ಟ್ ಚೆಕ್ನಲ್ಲಿ ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ನಡುವೆಯೇ ಬಿಜೆಪಿ ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ ಎನ್ನಲಾದ ವಿಡಿಯೋ ಟ್ವಿಟರ್ನಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಕಡೆಯಲ್ಲಿ ಜಂಗಾವ್ ಟ್ರಾಫಿಕ್ ಪೊಲೀಸ್ ಎಂದು ಬರೆದಿರೋದು ಕಾಣುತ್ತಿದೆ ಎಂದು ಎಎಫ್ಡಬ್ಲು ಹೇಳಿದೆ.
ಜಂಗಾವ್ ತೆಲಂಗಾಣದಲ್ಲಿರುವ ಒಂದು ಜಿಲ್ಲೆಯಾಗಿದೆ. ಇದು ಹೈದರಾಬಾದ್ನಿಂದ 85 ಕಿಲೋಮೀಟರ್ ದೂರದಲ್ಲಿದೆ. ಬಿಜೆಪಿಯ ಬೆನ್ನಟ್ಟಿ ಹೋಗುತ್ತಿರುವ ಕಾರ್ಯಕರ್ತರು ಗುಲಾಬಿ ಶಾಲು ಧರಿಸಿದ್ದಾರೆ. ತೆಲಂಗಾಣದ ಆಡಳಿತ ಪಕ್ಷ ಟಿಆರ್ಎಸ್ನ ಬಣ್ಣ ಗುಲಾಬಿ. ಅಲ್ಲದೇ ವಿಡಿಯೋದಲ್ಲಿ ಕಾಣುತ್ತಿರುವ ಅಂಗಡಿಗಳಲ್ಲಿ ಇಂಗ್ಲೀಷ್ ಹೊರತುಪಡಿಸಿ ತೆಲಗು ಭಾಷೆಯಲ್ಲಿ ಬೋರ್ಡ್ ಹಾಕಿರುವುದನ್ನು ಕಾಣಬಹುದಾಗಿದೆ.