ಸರಿಯಾದ ಶಿಕ್ಷಣ ವ್ಯವಸ್ಥೆಯ ಕೊರತೆಯಿಂದಾಗಿ, ಅಫ್ಘಾನಿಸ್ತಾನದ Paktika ಪ್ರಾಂತ್ಯದ ಐದು ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಪ್ರೌಢಶಾಲಾ ಪದವೀಧರರು ಇಲ್ಲವೆಂದು, ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ವೊರೊಂಬೈ, ತಾರ್ವಿ, ದಿಲಾ ಖೋಷಮಂಡ್, ನಾಕಾ ಮತ್ತು ಬರ್ಮಾಲ್ ಜಿಲ್ಲೆಗಳಲ್ಲಿ ಈ ಪರಿಸ್ಥಿತಿ ಇದೆ ಎಂದು ಟೋಲೋ ನ್ಯೂಸ್ ವರದಿಯಲ್ಲಿ ತಿಳಿಸಿದೆ.
Paktika ಪ್ರಾಂತ್ಯ ಡುರಾಂಡ್ ರೇಖೆಯ ಉದ್ದಕ್ಕೂ ಇದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ವಾಸ್ತವಿಕ ಗಡಿಯಾಗಿದೆ. ಕಳೆದ 20 ವರ್ಷಗಳಿಂದ, ಅಫ್ಘಾನಿಸ್ತಾನಕ್ಕೆ ಮಾನವೀಯ ಬೆಂಬಲದ ಭಾಗವಾಗಿ ಅಂತರರಾಷ್ಟ್ರೀಯ ಸಮುದಾಯದಿಂದ ಶತಕೋಟಿ ಡಾಲರ್‌ಗಳನ್ನು ಒದಗಿಸಲಾಗಿದ್ದರೂ ಸಹ Paktikaದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಇನ್ನೂ ಉತ್ತಮ ಪರಿಸ್ಥಿತಿಯಲ್ಲಿಲ್ಲ.
ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವ ಕುಟುಂಬಗಳು ತಮ್ಮ ಮಕ್ಕಳನ್ನು ಪ್ರಾಂತೀಯ ರಾಜಧಾನಿಯಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ಆದರೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಈ ಸೌಲಭ್ಯ ಹೇಗೆ ದೊರೆಯುತ್ತದೆ. ನಮ್ಮ ಜಿಲ್ಲೆಯಲ್ಲಿ ಯಾವುದೇ ಶಾಲೆಯನ್ನು ನಿರ್ಮಿಸಿಲ್ಲ. ನಮ್ಮ ಯುವಕರು ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ, ಎಂದು ಬರ್ಮಾಲ್ ಜಿಲ್ಲೆಯ ನಿವಾಸಿ ಜಾಹಿದ್ ತಿಳಿಸಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಖೋಷಾಮಂಡ್ ಜಿಲ್ಲೆಯಲ್ಲಿ ಯಾವುದೇ ಶಾಲೆ ಇರಲಿಲ್ಲ, ಇಸ್ಲಾಮಿಕ್ ಎಮಿರೇಟ್ ಅಂದರೆ ತಾಲಿಬಾನ್ ನಮಗೆ ಶಾಲೆಯನ್ನು ನಿರ್ಮಿಸಬೇಕು ಎಂದು ಇನ್ನೊಬ್ಬ ನಿವಾಸಿ ಮೊಹಮ್ಮದ್ ದೌದ್ ಮನವಿ ಮಾಡಿದ್ದಾರೆ. ಈ ಜಿಲ್ಲೆಗಳ ನಿವಾಸಿಗಳಿಗೆ ಶಾಲೆಗಳನ್ನು ನಿರ್ಮಿಸಲು ಮತ್ತು ಶೈಕ್ಷಣಿಕ ಅವಕಾಶಗಳನ್ನು ಒದಗಿಸುವಂತೆ ಬುಡಕಟ್ಟು ಜನಾಂಗದ ಹಿರಿಯರು ತಾಲಿಬಾನ್ ಅಥವಾ ಇಸ್ಲಾಮಿಕ್ ಎಮಿರೇಟ್‌ಗೆ ಕರೆ ನೀಡಿದ್ದಾರೆ.
ನಮ್ಮ ಪ್ರದೇಶದಲ್ಲಾಗಲಿ ಅಥವಾ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಕಳೆದ 20 ವರ್ಷದಿಂದ ಯಾವೊಬ್ಬನು ಪ್ರೌಢಶಾಲೆಯನ್ನು ಮುಗಿಸಿಲ್ಲ. ನಮಗಾಗಿ ಶಾಲೆಗಳನ್ನು ನಿರ್ಮಿಸಿ ಎಂದು, ನಾವು ಇಸ್ಲಾಮಿಕ್ ಎಮಿರೇಟ್ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಖೋಷಾಮಂಡ್‌ನ ಬುಡಕಟ್ಟು ಹಿರಿಯ ಅಬ್ದುಲ್ ರಹೀಮ್ ಹೇಳಿದ್ದಾರೆ.
ಇನ್ನು ಪ್ರಾಂತೀಯ ಶಿಕ್ಷಣ ಇಲಾಖೆಯು ಈ ವಿಷಯವನ್ನು ದೃಢಪಡಿಸಿದೆ. ಈ ಜಿಲ್ಲೆಗಳಲ್ಲಿ ಕಳೆದ 20 ವರ್ಷಗಳಲ್ಲಿ ಯಾವುದೇ ಪ್ರೌಢಶಾಲಾ ಪದವೀಧರರಿಲ್ಲ. ನಮ್ಮ ಗಮನವು ಪ್ರಸ್ತುತ ಶೈಕ್ಷಣಿಕ ಕೊರತೆ ಇರುವ ಪ್ರದೇಶಗಳ ಮೇಲೆ ಕೇಂದ್ರಕೃತವಾಗಿದೆ. ನಾವು ಅವರಿಗೆ ಅವರ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಒದಗಿಸಲು ಪ್ರಯತ್ನಿಸುತ್ತೇವೆ ಎಂದು Paktikaದ ಶಿಕ್ಷಣ ವಿಭಾಗದ ಮುಖ್ಯಸ್ಥರು ಭರವಸೆ ನೀಡಿದ್ದಾರೆ.