ಮುಂಬೈನ ಸೆಂಟ್ರಲ್ ರೈಲ್ವೆ ಹಾಗೂ ಶುಗರ್ಬಾಕ್ಸ್ ನೆಟ್ವರ್ಕ್ಗಳು ಸ್ಥಳೀಯ ರೈಲುಗಳಲ್ಲಿ ಕಂಟೆಂಟ್ ಆನ್ ಡಿಮ್ಯಾಂಡ್ ಎಂಬ ಹೊಸ ಸೇವೆಯನ್ನು ಆರಂಭಿಸಿದ್ದು ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಟಿವಿಯಲ್ಲಿ ಬರುವ ಕಾರ್ಯಕ್ರಮಗಳು, ಸಿನೆಮಾ ಹಾಗೂ ನ್ಯೂಸ್ಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪ್ರಯಾಣಿಕರಿಗೆ ಇನ್ಮುಂದೆ ರೈಲ್ವೆ ಪ್ರಯಾಣವು ಮನರಂಜನೆಯಿಂದ ಕೂಡಿರಲಿದೆ. ಮುಂಬೈ ಲೋಕಲ್ ರೈಲುಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಆಕರ್ಷಕ ಹಾಗೂ ಅನುಕೂಲಕರವಾಗಿಸಲು ಶುಕ್ರವಾರದಿಂದ ಮುಂಬೈನ ಸ್ಥಳೀಯ ರೈಲುಗಳಲ್ಲಿ ಕಂಟೆಂಟ್ ಆನ್ ಡಿಮ್ಯಾಂಡ್ ಸೇವೆಯನ್ನು ಆರಂಭಿಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ ಜಿಎಂ ಅನಿಲ್ ಕುಮಾರ್ ಲಹೋಟಿ, ಲೋಕಲ್ ಟ್ರೈನು ಮುಂಬೈನ ಸಾರ್ವಜನಿಕ ಸಾರಿಗೆಯ ಬೆನ್ನುಲುಬಾಗಿದೆ. ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನ 45 ಲಕ್ಷಕ್ಕೂ ಅಧಿಕ ಮಂದಿ ಲೋಕಲ್ ಟ್ರೇನುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಪ್ರಯಾಣಿಕರಿಗೆ ನಾವು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮಾಡುವ ಮೂಲಕ ಒಳ್ಳೆಯ ಸೇವೆಯನ್ನು ನೀಡಲು ನಿರ್ಧರಿಸಿದ್ದೇವೆ. ಅಲ್ಲದೇ ಪ್ರಯಾಣಿಕರಿಗೆ ಸೇವೆಯನ್ನು ಅಭಿವೃದ್ಧಿಪಡಿಸಿದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದರು.