ಬಿಜೆಪಿ ವಿರುದ್ಧದ ಟೀಕೆಗಳನ್ನು ದೇಶದ ವಿರುದ್ಧ ಟೀಕೆಗಳನ್ನಾಗಿ ಕಾಣುವಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಪಾದನೆ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಗಣತಂತ್ರೋತ್ಸವದ ದಿನದಂದು ತಮಿಳು ನಾಡಿದ ಸ್ತಬ್ಧಚಿತ್ರವನ್ನು ಪೆರೇಡ್‌ನಲ್ಲಿ ಭಾಗವಹಿಸಲು ಬಿಡದೇ ಇದ್ದದ್ದಕ್ಕೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ಸ್ವಾತಂತ್ರ‍್ಯ ಹೋರಾಟಗಾರರ ಪ್ರತಿಮೆಗಳನ್ನು ಈ ಬಾರಿ ಗಣತಂತ್ರೋತ್ಸವದ ಪರೇಡ್‌ನಲ್ಲಿ ರಾಜ್ಯದ ಪರವಾಗಿ ಸ್ತಬ್ದಚಿತ್ರವನ್ನಾಗಿ ಮೆರವಣಿಗೆ ಮಾಡಲು ಸ್ಟಾಲಿನ್ ಸರ್ಕಾರ ನಿರ್ಧರಿಸಿತ್ತು.
ಶ್ವಾನ ಮಾಡಿದ್ದ ಮಲ ತೆಗೆಯದಿದ್ದಕ್ಕೆ ಮಹಿಳೆಗೆ 42,000 ರೂ. ದಂಡ…!
ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಸ್ಟಾಲಿನ್, ಡಿಎಂಕೆ ಪರ ಮತಯಾಚನೆ ಮಾಡುತ್ತಾ, ತಮಿಳರಿಗೆ ಮೋದಿ ರಾಷ್ಟ್ರಪ್ರೇಮದ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ ಎಂದಿದ್ದು, ಸ್ವಾತಂತ್ರ‍್ಯ ಹೋರಾಟದಲ್ಲಿ ತಮಿಳರ ಕೊಡುಗೆಗಳು ಏನೆಂದು ಚೆನ್ನಾಗಿ ದಾಖಲಾಗಿವೆ ಎಂದಿದ್ದಾರೆ.
“ಬಿಜೆಪಿಯನ್ನು ಟೀಕಿಸುವುದು ದೇಶವನ್ನು ವಿರೋಧಿಸಿದಂತೆ ಎಂದು ಮೋದಿ ಭಾವಿಸಿದ್ದಾರೆ. ವೇಲು ನಾಚಿಯಾರ್, ಸುಬ್ರಹ್ಮಣ್ಯ ಭಾರತಿ, ಮಾರುಡು ಸಹೋದರರು ಮತ್ತು ವಿ ಓ ಚಿದಂಬರಂರಂಥ ತಮಿಳುನಾಡಿನ ಸ್ವಾತಂತ್ರ‍್ಯ ಹೋರಾಟಗಾರರ ಸ್ತಬ್ಧಚಿತ್ರಗಳನ್ನು ಪೆರೇಡ್‌ನಲ್ಲಿ ಭಾಗವಹಿಸದಂತೆ ತಡೆ ಹಿಡಿದವರು ಯಾರು ? ಪೆರೇಡ್‌ನಲ್ಲಿ ಭಾಗಿಯಾದ ಸ್ತಬ್ಧಚಿತ್ರಗಳಿಗಿಂತ ತಮಿಳು ನಾಡಿನ ಸ್ತಬ್ಧಚಿತ್ರ ಯಾವ ರೀತಿಯಲ್ಲಿ ಕಡಿಮೆ ಇತ್ತು ? ಖುದ್ದು ಪ್ರಧಾನ ಮಂತ್ರಿಯವರೇ ತಮ್ಮ ಭಾಷಣದಲ್ಲಿ ಭಾರತಿಯವರ ಪದ್ಯಗಳನ್ನು ಉಲ್ಲೇಖಿಸುವಾಗ ಅವರ ಪ್ರತಿಮೆಗೆ ಅನುಮತಿ ಕೊಡುವುದರಲ್ಲಿ ಏನು ಸಮಸ್ಯೆ ಇತ್ತು ?” ಎಂದು ಸ್ಟಾಲಿನ್ ಇದೇ ವೇಳೆ ಪ್ರಶ್ನಿಸಿದ್ದಾರೆ.
ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ಅಂತಿಮ ಯಾತ್ರೆ ವೇಳೆ ಕೊಯಮತ್ತೂರಿನಲ್ಲಿ ಜನರು ಅವರಿಗೆ ಕೊಟ್ಟ ಗೌರವ ನಮನ ’ವೀರ ವಣಕ್ಕಂ’ ಕುರಿತು ಸಂಸತ್ತಿನಲ್ಲಿ ಪ್ರಧಾನಿ ಮಾತನಾಡಿದ್ದನ್ನು ಕುರಿತು ಪ್ರತಿಕ್ರಿಯಿಸಿದ ಸ್ಟಾಲಿನ್, “ದೇಶಕ್ಕಾಗಿ ಹೋರಾಡಿ, ಕೊಡುಗೆ ಕೊಟ್ಟ ಮಂದಿಗೆ ತಮಿಳುನಾಡು ಯಾವಾಗಲೂ ಗೌರವಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ತಮಿಳರಿಗೆ ಪ್ರಧಾನಿ ಪ್ರಮಾಣ ಪತ್ರಗಳನ್ನು ಕೊಡಬೇಕಿಲ್ಲ. ಈ ಮಾತಿಗೆ ಇತಿಹಾಸವೇ ಸಾಕ್ಷಿ. ಯಾವುದು ದೇಶವನ್ನು ಕಟ್ಟುತ್ತದೆ ಎಂಬ ವಿಚಾರವಾಗಿ ನಮಗೆ ಮತ್ತು ಅವರಿಗೆ ಸಮಸ್ಯೆ ಇದೆ. ಅವರಿಗೆ ದೇಶವೊಂದು ಪ್ರದೇಶ ಅನಿಸಿದರೆ ನಮಗೆ ದೇಶವೆಂದರೆ ಅಲ್ಲಿ ವಾಸಿಸುತ್ತಿರುವ ಜನ ಎನಿಸುತ್ತದೆ,” ಎಂದಿದ್ದಾರೆ.
ತನ್ನ ಸ್ತಬ್ದಚಿತ್ರವನ್ನು ಕೇಂದ್ರ ನಿರಾಕರಿಸಿದ ಬಳಿಕ ತಮಿಳುನಾಡು ಸರ್ಕಾರ ಅದನ್ನು ಚೆನ್ನೈನಲ್ಲಿ ಜನವರಿ 26ರಂದು ಪ್ರದರ್ಶನಕ್ಕಿಟ್ಟು, ರಾಜ್ಯದ ಪ್ರಮುಖ ನಗರಗಳಲ್ಲಿ ತೋರಿಸಲು ನಿರ್ಧರಿಸಿತ್ತು.