ಮೆಟಾ ಮಾಲೀಕತ್ವದ ಫೇಸ್ಬುಕ್ ಆರಂಭದ ದಿನಗಳಿಂದಲೂ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ಆದರೆ ಬುಧವಾರದಂದು ಆಶ್ಚರ್ಯಕರ ಎಂಬಂತೆ ಮೊದಲ ತ್ರೈಮಾಸಿಕದ ಅವಧಿಯಲ್ಲಿ ಜಾಗತಿಕವಾಗಿ ದೈನಂದಿನ ಬಳಕೆದಾರರಲ್ಲಿ ಫೇಸ್ಬುಕ್ ಕುಸಿತವನ್ನು ಕಂಡಿದೆ. ಅಲ್ಲದೇ ನಿರೀಕ್ಷೆಗಿಂತ ಕಡಿಮೆ ಜಾಹೀರಾತುಗಳ ಬೆಳವಣಿಗೆಯೊಂದಿಗೆ ತನ್ನ ಷೇರುಗಳಲ್ಲಿ ಇಪ್ಪತ್ತು ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.
ಹಿಂದಿನ ತ್ರೈಮಾಸಿಕದಲ್ಲಿ 1.93 ಶತಕೋಟಿಯಿಂದ 1.929 ಮಿಲಿಯನ್ ಬಳಕೆದಾರರಿಗೆ ಫೇಸ್ಬುಕ್ ಇಳಿಮುಖವನ್ನು ಕಂಡಿದೆ. ಈ ಮೂಲಕ ಯುವಜನತೆ ಫೇಸ್ಬುಕ್ನತ್ತ ಮುಖ ಮಾಡುವುದನ್ನು ಕಡಿಮೆ ಮಾಡಿದ್ದಾರೆ ಎಂಬ ಅನುಮಾನ ಕಾಡಲು ಆರಂಭವಾಗಿದೆ.
ಟಿಕ್ಟಾಕ್ನಂತಹ ಪ್ರತಿಸ್ಪರ್ಧಿಗಳು ಹಾಗೂ ಆ್ಯಪಲ್ ಕಂಪನಿಗಳಲ್ಲಿ ಹೆಚ್ಚಿನ ಭದ್ರತಾ ನಿಯಮಗಳ ಕಾರಣದಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಆದಾಯವು ನಿರೀಕ್ಷೆಗಿಂತ ಕಡಿಮೆ ಬರುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿತ್ತು.
ಮೆಟಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೆರಿಲ್ ಸ್ಯಾಂಡ್ಬರ್ಗ್, ಸಿಬ್ಬಂದಿ ಕೊರತೆ, ಜಾಗತಿಕ ಪೂರೈಕೆಯ ಸರಪಳಿ ಸಮಸ್ಯೆ, ಜಾಹೀರಾತುದಾರರ ಸಮಸ್ಯೆಯಿಂದಾಗಿ ಕಂಪನಿಯ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.