ಚಿಕ್ಕಬಳ್ಳಾಪುರ : ಪ್ರಾಂಶುಪಾಲರ ನಕಲಿ ಸಹಿ ಮಾಡಿ ಗುಮಾಸ್ತನೊಬ್ಬ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 68.65 ಲಕ್ಷ ರೂ. ಹಣವನ್ನು ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ಕಾರವು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆರ್ಥಿಕ ಸಹಾಯದ ಹಿನ್ನೆಲೆಯಲ್ಲಿ ವಿತರಿಸಲು 68.65 ಲಕ್ಷ ರೂ. ಹಣ ಬಿಡುಗಡೆ ಮಾಡಿತ್ತು. ಆದರೆ, ಕಾಲೇಜಿನ ದ್ವಿತೀಯ ದರ್ಜೆ ಗುಮಾಸ್ತ ಎನ್. ಸಂತೋಷ್ ಕುಮಾರ್ ಎಂಬ ವ್ಯಕ್ತಿ ತನ್ನ ವೈಯಕ್ತಿಕ ಖಾತೆಗೆ ಈ ಹಣವನ್ನೆಲ್ಲ ವರ್ಗಾವಣೆ ಮಾಡಿಕೊಂಡಿದ್ದಾನೆ.
ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಕಾಲೇಜಿನ ಪ್ರಾಂಶುಪಾಲರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಹಣವನ್ನೆಲ್ಲ ಪ್ರಾಂಶುಪಾಲರ ನಕಲಿ ಸಹಿಯೊಂದಿಗೆ ತನ್ನ ಖಾತೆಗೆ ವರ್ಗಾಯಿಸಿದ್ದಾನೆ. ಹಣವೆಲ್ಲ ಈತನ ಖಾತೆಗೆ ವರ್ಗಾವಣೆಯಾಗುತ್ತಿದ್ದಂತೆ ಈತ ಕಾಲೇಜಿಗೆ ಬರುವುದನ್ನೇ ಬಿಟ್ಟಿದ್ದಾನೆ. ಈ ಕುರಿತು ಸಿಬ್ಬಂದಿ ಆತನಿಗೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದರೂ ಆತ ಮಾತ್ರ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಅನುಮಾನಗೊಂಡು, ಆತ ನಿರ್ವಹಿಸಿದ್ದ ಕಡತಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 68.65 ಲಕ್ಷ ರೂ. ಹಣ ದೋಚಿರುವುದು ತಿಳಿದು ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.