ಕೋಲಾರ: ರೈತರೊಬ್ಬರು ಪಡಿತರ ತೆಗೆದುಕೊಳ್ಳಲು ಹೋಗಿದ್ದಾಗ, ಅದರಲ್ಲಿ ಅವರ ಹೆಸರು ಕಂಡಿಲ್ಲ. ಏನೋ ದೋಷ ಆಗಿರಬಹುದು ಎಂದು ಮತ್ತೊಮ್ಮೆ ಕಚೇರಿಗಳಿಗೆ ಅಲೆದಾಡಿ ಸರಿಪಡಿಸಿದರಾಯಿತು ಎಂದು ರೈತ ಭಾವಿಸಿದ್ದರು. ಆದರೆ, ಸರಿಯಾಗಿ ಗಮನಿಸುತ್ತಿದ್ದಂತೆ ಅವರು ಸಾವನ್ನಪ್ಪಿರುವುದಾಗಿ ದಾಖಲಾಗಿರುವುದು ಕಂಡು ರೈತ ಅವಾಕ್ಕಾಗಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ರೈತ, ಕಚೇರಿಗೆ ತೆರಳಿ ವಿಚಾರಿಸಿದ್ದಾರೆ. ಹಿಂದಿನ ತಹಸೀಲ್ದಾರ್ ಜಿ. ರಾಜಶೇಖರ ಸೇರಿದಂತೆ ನಾಲ್ವರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ ಎಂದು ತಿಳಿದು ಬಂದಿದ್ದು, ಸದ್ಯ ತಹಸೀಲ್ದಾರ್ ಸೇರಿದಂತೆ ನಾಲ್ವರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಅಲ್ಲದೇ, ಈ ಕುರಿತು ಎಫ್ಐಆರ್ ಕೂಡ ದಾಖಲಾಗಿದೆ. ಮುಳಬಾಗಿಲು ತಾಲೂಕಿನ ಎಂ.ಹೊಸಹಳ್ಳಿ ಎಂಬ ಗ್ರಾಮದ ಶಿವರಾಜ್(40) ಎಂಬ ರೈತರ ಹೆಸರಿನಲ್ಲಿಯೇ ಈ ರೀತಿ ಮರಣ ಪ್ರಮಾಣ ಪತ್ರವನ್ನು ಅಧಿಕಾರಿಗಳು ನೀಡಿದ್ದಾರೆ.