ಕೊಚ್ಚಿಯ ಕೊಡುಂಗಲ್ಲೂರಿನ ನಿವಾಸಿಯಾದ 58 ವರ್ಷದ ನಜೀಬ್ ಎಂಬವರು 2022ನೇ ವರ್ಷವನ್ನು ನೋಡುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಅವರು ಮಹಾಪಧಮನಿಯ ಬಹುದೊಡ್ಡ ಸಮಸ್ಯೆಯಿಂದ ಬಳಲುತ್ತಿದ್ದರು. ಇದೊಂದು ಬಹುದೊಡ್ಡ ಹೃದ್ರೋಗ ಸಮಸ್ಯೆ ಆಗಿದ್ದ ಹಿನ್ನೆಲೆಯಲ್ಲಿ ಅನೇಕ ಆಸ್ಪತ್ರೆಗಳು ಇವರಿಗೆ ಚಿಕಿತ್ಸೆಯನ್ನು ನೀಡಲು ಮುಂದೆ ಬರಲಿಲ್ಲ.
ಕಳೆದ ವರ್ಷ ಡಿಸೆಂಬರ್ 30ರಂದು ನಜೀಬ್ರನ್ನು ಆಸ್ಟರ್ ಮೆಡ್ಸಿಟಿಗೆ ಕರೆತಂದಾಗ ಅವರ ಮೆದಳು ಹಾಗೂ ಕೈಗಳಿಗೆ ರಕ್ತದ ಹರಿವು ಸಂಪೂರ್ಣವಾಗಿ ನಿಂತು ಹೋಗಿತ್ತು. ನಜೀಬ್ ಪಾರ್ಶ್ವವಾಯು, ಹೃದಾಯಾಘಾತ ಹಾಗೂ ಮೂತ್ರಪಿಂಡ ವೈಫಲ್ಯದ ಅಪಾಯದಲ್ಲಿದ್ದರು. ಇಂತಹ ಕಠಿಣ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಬರೋಬ್ಬರಿ 16 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಅವರನ್ನು ಬದುಕಿಸಿದ್ದಾರೆ.
ಸಂಪೂರ್ಣ ಜಗತ್ತು ಹೊಸ ವರ್ಷ ಬರಮಾಡಿಕೊಳ್ಳುವ ಉಮೇದಿಯಲ್ಲಿದ್ದರೆ ಇಲ್ಲಿನ ವೈದ್ಯರು ನಜೀಬ್ ಬದುಕುಳಿಯುವ ಸಾಧ್ಯತೆ ಕೇವಲ 30 ಪ್ರತಿಶತ ಮಾತ್ರ ಎಂದು ಹೇಳಿದ್ದರು. ಡಿಸೆಂಬರ್ 31ರ ಬೆಳಗ್ಗೆ 8 ಗಂಟೆಯಿಂದ ನಜೀಬ್ಗೆ ಶಸ್ತ್ರಚಿಕಿತ್ಸೆಗಳು ಆರಂಭವಾದವು. ಕೊನೆಗೂ ನಜೀಬ್ 2022ರ ಹೊಸ ವರ್ಷವನ್ನು ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಅರವಳಿಕೆ ಹಾಗೂ ಕ್ರಿಟಿಕಲ್ ಕೇರ್ ವಿಭಾಗದ ಡಾ. ಸುರೇಶ್ ಜಿ ನಾಯರ್, ಇದೊಂದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾಗಿದೆ ಎಂದು ಹೇಳಿದ್ದಾರೆ.