ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಬೇಕೇ, ಬೇಡವೇ ಎನ್ನುವ ಚರ್ಚೆ ತೀವ್ರತರವಾಗಿದೆ. ರಾಜ್ಯದ ಜನ ಮತ್ತು ರಾಜಕೀಯ ಒತ್ತಡಕ್ಕೆ ಮಣಿದ ಸರ್ಕಾರ ನಿಲುವಿನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸಬೇಕೇ ಬೇಡವೇ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಂಗಳೂರು ಸೇರಿದಂತೆ ಕೊರೊನಾ ಸೋಂಕು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರೆಸಿ ಉಳಿದ ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈಗಾಗಲೇ ಉದ್ಯಮ ಮತ್ತು ಕಾರ್ಮಿಕ ವಲಯ ಸೇರಿದಂತೆ ವಿವಿಧ ವಲಯಗಳಿಂದ ವೀಕೆಂಡ್ ಕರ್ಫ್ಯೂಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಡಳಿತ ಪಕ್ಷದ ನಾಯಕರು ಕೂಡ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತಜ್ಞರ ಮಾಹಿತಿಯ ಪ್ರಕಾರ, ಕೊರೊನಾ ಸೋಂಕು ಇನ್ನು ಏರಿಕೆ ಕಾಣಲಿದೆ. ಶುಕ್ರವಾರದ ಸಭೆಯಲ್ಲಿ ತಜ್ಞರ ಸಲಹೆ, ಮಾಹಿತಿ, ವರದಿ ಆಧರಿಸಿ ನಾಳಿನ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಕೈಬಿಡುವ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.