ತಮಿಳು ನಟ ಧನುಷ್ ಹಾಗೂ ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕೊನೆ ಹಾಡಿರುವ ಸುದ್ದಿ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದೆ. ಈ ದಂಪತಿ ತಾವು ಬೇರ್ಪಟ್ಟ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಬೆನ್ನಲ್ಲೇ ಇದೀಗ ಧನುಷ್ ಹಾಗೂ ಐಶ್ವರ್ಯಾ ನಡುವೆ ವಿಚ್ಚೇಧನವಾಗಿಲ್ಲ. ಬದಲಾಗಿ ಇದೊಂದು ಕೌಟುಂಬಿಕ ಕಲಹ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.
ಈ ಸಂಬಂಧ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಧನುಷ್ ತಂದೆ ಹಾಗೂ ನಿರ್ಮಾಪಕ ಕಸ್ತೂರಿ ರಾಜಾ ತಮ್ಮ ಪುತ್ರ ಹಾಗೂ ಸೊಸೆಯ ವಿಚ್ಚೇದನದ ವಿಚಾರವನ್ನು ತಳ್ಳಿ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕಸ್ತೂರಿ ರಾಜಾ ಅವರು, ಧನುಷ್ ಹಾಗೂ ಐಶ್ವರ್ಯಾ ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಬೇರ್ಪಟ್ಟಿದ್ದಾರೆ. ಇದು ಸಾಮಾನ್ಯವಾಗಿ ದಂಪತಿಯ ನಡುವೆ ಇರುವ ಕೌಟುಂಬಿಕ ಕಲಹವಾಗಿದೆ. ಪ್ರಸ್ತುತ ಈ ದಂಪತಿ ಚೆನ್ನೈನಲ್ಲಿಲ್ಲ . ಹೈದರಾಬಾದ್ನಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.
ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ನಿರ್ದೇಶಕಿ ಐಶ್ವರ್ಯಾ ಈ ವಾರದ ಆರಂಭದಲ್ಲಿ ಸೋಶಿಯಲ್ ಮೀಡಿಯಾ ಪೋಸ್ಟ್ಗಳ ಮೂಲಕ ಮಾಹಿತಿ ಬಹಿರಂಗಪಡಿಸಿದ್ದರು. ಅತರಂಗಿ ರೇ ಸಿನಿಮಾದಲ್ಲಿ ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡಿರುವ ನಟ ಧನುಷ್ ಟ್ವಿಟರ್ನಲ್ಲಿ ಈ ಪತ್ರವನ್ನು ಪೋಸ್ಟ್ ಮಾಡಿದ್ದರೆ ಐಶ್ವರ್ಯಾ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ವಿಚಾರವನ್ನು ಬಹಿರಂಗಪಡಿಸಿದ್ದಾರೆ.