ನಮಗೆ ಅಲರ್ಜಿ ಇರುವ, ನಮ್ಮ ದೇಹಕ್ಕೆ ಒಗ್ಗದ ಆಹಾರ ಸೇವಿಸಿದರೆ, ತಿಂಡಿ ತಿಂದರೆ ಹೆಚ್ಚೆಂದರೆ ವಾಂತಿ-ಭೇದಿ ಆಗಬಹುದು. ಫುಡ್ ಪಾಯ್ಸನ್ ಆಗಬಹುದು. ಆದರೆ, ಬ್ರಿಟನ್ನ ನ್ಯೂ ಕ್ಯಾಸಲ್ ನಗರದಲ್ಲಿ ಮಹಿಳೆಯೊಬ್ಬರು ಊಟವಾದ ಬಳಿಕ ಕಡಲೆಕಾಯಿಯಿಂದ ಮಾಡಿದ ಸಿಹಿತಿನಿಸು ತಿಂದು ಪ್ರಾಣ ಬಿಟ್ಟಿರುವುದು ಈಗ ವೈದ್ಯಕೀಯ ಲೋಕಕ್ಕೇ ಅಚ್ಚರಿಯಾಗಿದೆ.
ಹನ್ನಾ ಸಿಗಾಲಾ ಎಂಬ 31 ವರ್ಷದ ಮಹಿಳೆಯು ಕಳೆದ ಜನವರಿ 4ರಂದು ತಮ್ಮ ಮೂವರು ಮಕ್ಕಳೊಂದಿಗೆ ರಾತ್ರಿ ಊಟ ಮಾಡಿದ್ದಾರೆ. ಇದಾದ ಬಳಿಕ ತಮಗೆ ಅಲರ್ಜಿ ಎಂದು ಗೊತ್ತಿದ್ದರೂ ಕಡಲೆಕಾಯಿಯಿಂದ ಮಾಡಿದ ಸಿಹಿ ತಿಂಡಿ ತಿಂದಿದ್ದಾರೆ. ತಿಂಡಿ ತಿಂದ ಕೆಲವೇ ನಿಮಿಷದಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ಕೂಡಲೇ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟೊತ್ತಿಗಾಗಲೇ ಆಕೆಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರು: ಒಂದೇ ವಾರದಲ್ಲಿ 2,638 ಮಕ್ಕಳಿಗೆ ಕೋವಿಡ್ ಪಾಸಿಟಿವ್
ಸಿಹಿ ತಿಂಡಿ ತಿಂದಿದ್ದಕ್ಕೇ ಮಹಿಳೆ ಏಕೆ ಪ್ರಾಣ ಕಳೆದುಕೊಳ್ಳುವಂತಾಯಿತು ಎಂಬುದು ವೈದ್ಯರಿಗೂ ಅಚ್ಚರಿ ಮೂಡಿಸಿದೆ. ಆಸ್ಪತ್ರೆಗೆ ಕರೆದುಕೊಂಡು ಬರುವ ಮೊದಲೇ ಆಕೆಯ ಪರಿಸ್ಥಿತಿ ಗಂಭೀರವಾಗಿತ್ತು. ಮಾರ್ಗ ಮಧ್ಯೆಯೇ ಮಹಿಳೆಗೆ ಹೃದಯಾಘಾತವಾಗಿದೆ. ಇದಾದ ಬಳಿಕ ಮಿದುಳು ನಿಷ್ಕ್ರಿಯವಾಗಿದೆ ಎಂದಷ್ಟೇ ವೈದ್ಯರು ತಿಳಿಸಿದ್ದಾರೆ.
ಹನ್ನಾ ಸಹೋದರಿ ಸ್ಟೆಫಾನಿ ಅವರು ಈ ಕುರಿತು ಮಾತನಾಡಿದ್ದು, ಹನ್ನಾಗೆ ಕಡಲೆಕಾಯಿ ಸಿಹಿ ತಿಂಡಿ ಎಂದರೆ ಅಲರ್ಜಿ ಇತ್ತು. ಹಾಗಾಗಿ, ಕಡಲೆಕಾಯಿ ಇಲ್ಲದ ಆಹಾರವನ್ನೇ ಆಕೆ ಸೇವಿಸುತ್ತಿದ್ದಳು. ಆದರೆ, ಕಳೆದ ಬಾರಿ ಆಕೆ ಏಕೆ ಕಡಲೆಕಾಯಿ ತಿನಿಸು ಮಾಡಿದಳು ? ಮಾಡಿದರೂ ಏಕೆ ಅದನ್ನು ಸೇವಿಸಿದಳು ಎಂಬುದಕ್ಕೆ ಈಗಲೂ ಉತ್ತರ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅಲರ್ಜಿ ಆಗುವ ಆಹಾರವನ್ನು ಸೇವಿಸದಿರುವುದೇ ಒಳಿತು ಎಂಬುದಕ್ಕೆ ಹನ್ನಾ ಸಾವೇ ಎಚ್ಚರಿಕೆಯ ಗಂಟೆಯಾಗಿದೆ.