ಭಾರತದಲ್ಲಿ ಇದೇ ಮೊದಲ ಬಾರಿಗೆ ಐವಿಎಫ್ (ಕೃತಕ ಗರ್ಭಧಾರಾಣೆ) ಮೂಲಕ ಪುಂಗನೂರು ತಳಿಯ ಕರು ಜನಿಸಿದೆ. ವಿಶ್ವದ ಅತ್ಯಂತ ಕಡಿಮೆ ತಳಿಗಳ ಪೈಕಿ ಪುಂಗನೂರು ತಳಿಯ ಹಸುಗಳು 500ಕ್ಕಿಂತ ಕಡಿಮೆ ಇವೆ. ಇದೀಗ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಈ ತಳಿಯ ಹಸುವೊಂದು ಐವಿಎಫ್ ಮುಖಾಂತರ ಕರುವಿಗೆ ಜನ್ಮ ನೀಡಿದೆ.
ಈ ಸಂಬಂಧ ಸ್ವತಃ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಮಾಹಿತಿ ಪ್ರಕಟಿಸಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ, ಸ್ಥಳೀಯ ಜಾನುವಾರುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಇಲಾಖೆಯು ಈ ಯೋಜನೆಯನ್ನು ಪ್ರಾರಂಭಿಸಿದೆ.
ಹಲವಾರು ಕಾರಣಗಳಿಂದಾಗಿ ಕಳೆದ ಕೆಲವು ದಶಕಗಳಲ್ಲಿ ಭಾರತವು ಸ್ಥಳೀಯ ಜಾನುವಾರುಗಳ ಕುಸಿತವನ್ನು ಕಂಡಿದೆ. ಈಗ ಪಶುಸಂಗೋಪನಾ ಇಲಾಖೆಯು ಸ್ಥಳೀಯ, ಅಪರೂಪದ ಗೋವುಗಳನ್ನು ಸಂರಕ್ಷಿಸುವ ಸಲುವಾಗಿ ಜಾನುವಾರುಗಳಿಗೆ ಐವಿಎಫ್ ಬಳಕೆಯನ್ನು ಉತ್ತೇಜಿಸುತ್ತಿದೆ. ಬನ್ನಿ, ತಾರ್ಪಾಕರ್ ಮತ್ತು ಒಂಗೋಲ್ ತಳಿಗಳಿಗೂ ಹೈನುಗಾರಿಕಾ ಇಲಾಖೆ ಇದೇ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ.
ಕಳೆದ ಅಕ್ಟೋಬರ್‌ನಲ್ಲಿ, ಭಾರತದ ಮೊದಲ ಬನ್ನಿ ಎಮ್ಮೆ ಮೂಲಕ ಐವಿಎಫ್ ಕರು ಗುಜರಾತ್‌ನ ಸೋಮನಾಥ್ ಜಿಲ್ಲೆಯಲ್ಲಿ ಜನಿಸಿದ್ರೆ, ರಾಜಸ್ಥಾನದ ಸೂರತ್‌ಗಢದಲ್ಲಿ ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಧರಿಸಿದ ತಾರ್ಪಾಕರ್ ತಳಿಯ ಮೊದಲ ಹೆಣ್ಣು ಕರು ಜನಿಸಿತ್ತು.