ಓಮಿಕ್ರಾನ್ ವೈರಸ್ ಕಡಿಮೆ ತೀವ್ರತೆಯನ್ನು ಹೊಂದಿರುವುದು ಸದ್ಯಕ್ಕೆ ಒಳ್ಳೆಯ ಸುದ್ದಿ. ಹಾಗೆಂದ ಮಾತ್ರಕ್ಕೆ ಎಲ್ಲ ಸಂಕಷ್ಟಗಳೂ ದೂರವಾಯ್ತು ಎಂದಲ್ಲ. ಕೋವಿಡ್ 19 ಸೋಂಕು ಬಹಳ ಪರಿಣಾಮಕಾರಿಯಾಗಿ ಹರಡುತ್ತಿದೆ. ಇದು ಸೌಮ್ಯವಾಗಲು ಯಾವುದೇ ಕಾರಣಗಳು ಗೋಚರವಾಗುತ್ತಿಲ್ಲ. ಮುಂದಿನ ರೂಪಾಂತರಿಯು ಇನ್ನಷ್ಟು ಭಯಾನಕವಾಗಿರಬಹುದು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ಪ್ರಮುಖ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ.
ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಫಾರ್ ಥೆರಪ್ಯೂಟಿಕ್ ಇಮ್ಯೂನಾಲಜಿ ಹಾಗೂ ಇನ್ಫೆಕ್ಷಿಯಸ್ ಡಿಸೀಸ್ನಲ್ಲಿ ಕ್ಲಿನಿಕಲ್ ಮೈಕ್ರೋಬಯಾಲಜಿಯ ಪ್ರೊಫೆಸರ್ ಆಗಿರುವ ರವೀಂದ್ರ ಗುಪ್ತಾ ಅವರು ಓಮಿಕ್ರಾನ್ ರೂಪಾಂತರಿಯ ಕುರಿತು ಅಧ್ಯಯನ ನಡೆಸಿದ್ದಾರೆ.
ಅಧ್ಯಯನದಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ ಹೊಸ ರೂಪಾಂತರಿಯಾದ ಓಮಿಕ್ರಾನ್ ಶ್ವಾಸಕೋಶಗಳಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇದು ಹೀಗೆಯೇ ಸೌಮ್ಯವಾಗಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಾಂತರಗಳಲ್ಲಿ ಇದು ತನ್ನ ತೀವ್ರತೆಯನ್ನು ಬದಲಾಯಿಸಬಹುದು ಎಂದು ಗುಪ್ತಾ ಹೇಳಿದ್ದಾರೆ.