ಚಾಮರಾಜನಗರ: ಚಾಮರಾಜನಗರ ಠಾಣೆ ಪೊಲೀಸರು 5 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಲತಂದೆಯನ್ನು ಬಂಧಿಸಿದ್ದಾರೆ.
ಮಗುವಿನ ಮೇಲೆ ಅತ್ಯಾಚಾರ ಎಸಗಿದ ಕುರಿತಾಗಿ ತಾಯಿ ದೂರು ನೀಡಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು 45 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. 5 ವರ್ಷದ ಹೆಣ್ಣು ಮಗುವಿನ ತಾಯಿಗೆ ಆರೋಪಿ ಎರಡನೇ ಪತಿಯಾಗಿದ್ದಾನೆ. ಕಿರುಕುಳ ತಾಳದೇ ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ, ಮೈಸೂರಿನ ಆರೋಪಿಯನ್ನು ಎರಡನೇ ಮದುವೆಯಾಗಿದ್ದರು.
ಮದ್ಯಪಾನ ಮಾಡಿ ಮನೆ ಬರುತ್ತಿದ್ದ ಆರೋಪಿ ಜಗಳವಾಡುತ್ತಿದ್ದರಿಂದ ಇತ್ತೀಚೆಗೆ ತವರುಮನೆಗೆ ಬಂದಿದ್ದು, ಮಹಿಳಾ ಠಾಣೆಗೆ ದೂರು ನೀಡಿದ್ದರೆನ್ನಲಾಗಿದೆ.