ಭಿವಾನಿ : ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಟ್ಟ ಕುಸಿದ ಹಿನ್ನೆಲೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದು, ಸುಮಾರು 10 ಜನರು ಮಣ್ಣು ಹಾಗೂ ಕಲ್ಲಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಈ ದುರ್ಘಟನೆಯು ಹರಿಯಾಣದ ಭಿವಾನಿ ಜಿಲ್ಲೆಯ ದಡಮ್ ಎಂಬಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಬೆಟ್ಟ ಕುಸಿದಿದೆ. ಬೃಹತ್ ಪ್ರಮಾಣದ ಬೆಟ್ಟ ಕುಸಿದಿದ್ದರಿಂದಾಗಿ ಈ ಕಾರ್ಯಕ್ಕೆ ಬಳಸುತ್ತಿದ್ದ ವಾಹನಗಳು, ಡಂಪರ್ ಹಾಗೂ ಸುಮಾರು 6ರಷ್ಟು ಪಾಪ್ ಲ್ಯಾಂಡ್ ಯಂತ್ರಗಳು ಕೂಡ ಹೂತು ಹೋಗಿವೆ.
ಕೆಲಸ ಮಾಡುತ್ತಿದ್ದ ಸುಮಾರು 10 ಜನ ಸಾವನ್ನಪ್ಪಿ, ಹಲವರು ಕಲ್ಲು ಹಾಗೂ ಮಣ್ಣಿನ ರಾಶಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಸಾವನ್ನಪ್ಪಿದವರ ಹಾಗೂ ಮಣ್ಣಿನಡಿ ಸಿಲುಕಿರುವ ಜನರ ಕುಟುಂಬಸ್ಥರ ಆಕ್ರಂದನ ಸ್ಥಳದಲ್ಲಿ ಮುಗಿಲು ಮುಟ್ಟಿದೆ.
ಕುದಿಯುವ ಎಣ್ಣೆಗೆ ಕೈ ಹಾಕಿ ಅಚ್ಚರಿ ಮೂಡಿಸಿದ ಪಕೋಡ ವ್ಯಾಪಾರಿ
ಬೆಟ್ಟ ಕುಸಿತದ ಭಾರೀ ಸದ್ದು ಕೇಳಿಸುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮಣ್ಣಿನಲ್ಲಿ ಹೂತು ಹೋದವರನ್ನು ಹೊರಗೆ ತೆಗೆಯುವ ಕಾರ್ಯ ನಡೆಯುತ್ತಿದೆ. ಆದರೆ, ಅಲ್ಲಿನ ಸ್ಥಳೀಯ ಅಧಿಕಾರಿಗಳು ಈ ಕುರಿತು ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಊಹಿಸಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.