ಪಿಲಿಭಿತ್ನ ಬಿಜೆಪಿ ಸಂಸದ ವರುಣ್ ಗಾಂಧಿ ದೇಶದಲ್ಲಿ ಕೊರೊನಾ ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಿದ ಸಂಬಂಧ ಸ್ವಪಕ್ಷದ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿಯಲ್ಲಿ ಕರ್ಫ್ಯೂ ವಿಧಿಸುವುದು ಹಾಗೂ ಬೆಳಗ್ಗೆ ಲಕ್ಷಾಂತರ ಜನರನ್ನು ಸೇರಿಸಿ ರ್ಯಾಲಿಗಳನ್ನು ಮಾಡುವ ಸರ್ಕಾರದ ಕ್ರಮವು ಜನರ ಗ್ರಹಿಕೆಯನ್ನೇ ಮೀರಿದೆ ಎಂದು ವರುಣ್ ಗಾಂಧಿ ಟ್ಬೀಟಾಯಿಸಿದ್ದಾರೆ.
ಉತ್ತರ ಪ್ರದೇಶದ ಸೀಮಿತ ಆರೋಗ್ಯ ವ್ಯವಸ್ಥೆಗಳನ್ನು ಗಮನಿಸಿದರೆ ಭಯಾನಕ ಓಮಿಕ್ರಾನ್ ಹರಡುವುದನ್ನು ನಿಲ್ಲಿಸುವುದರ ಬದಲು ಚುನಾವಣಾ ಶಕ್ತಿಯನ್ನು ತೋರಿಸುವುದೇ ನಮ್ಮ ಆದ್ಯತೆಯಾಗಿದೆಯೇ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಶನಿವಾರದಂದು ಗಾಜಿಯಾಬಾದ್ನಲ್ಲಿ ನಡೆದ ಜನ ವಿಶ್ವಾಸ ಯಾತ್ರೆಯಲ್ಲಿ ಭಾಗಿಯಾಗಿದ್ದರು. ಇದು ಮಾತ್ರವಲ್ಲದೇ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಈ ದಿನಗಳಲ್ಲಿ ಸಾಕಷ್ಟು ರ್ಯಾಲಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ಹೆಚ್ಚಾಗಿವೆ.