ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ನಟ ಜೇಮ್ಸ್ ಫ್ರಾಂಕೋ ಈ ಹಿಂದೆ ತಾವು ನಡೆಸುತ್ತಿದ್ದ ನಟನಾ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಲಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಲೈಂಗಿಕತೆಯ ದಾಸನಾಗಿದ್ದ ತಾವು ಇದರಿಂದ ಹೊರಬರಲು ಸಾಕಷ್ಟು ಹೋರಾಡಿದ್ದಾಗಿ ಹೇಳಿದ್ದಾರೆ.
ದಿ ಜೆಡ್ ಕಾಗಲ್ ಪಾಡ್ಕ್ಯಾಸ್ಟ್ ಆಯ್ದ ಭಾಗಗಳಲ್ಲಿ 43 ವರ್ಷದ ಜೇಮ್ಸ್ ಫ್ರಾಂಕೋ ತಾವು ನಟನಾ ಶಾಲೆಯನ್ನು ನಡೆಸುತ್ತಿದ್ದಾಗ ಅಲ್ಲಿನ ವಿದ್ಯಾರ್ಥಿನಿಯರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಈ ರೀತಿ ಮಾಡಿದ್ದು ತಪ್ಪು ಎಂದೂ ಒಪ್ಪಿಕೊಂಡಿದ್ದಾರೆ. ಲೈಂಗಿಕ ಉದ್ದೇಶಕ್ಕೆ ಮಹಿಳೆಯರನ್ನು ಸೆಳೆಯಲೆಂದೇ ತಾವು ಈ ಶಾಲೆಯನ್ನು ಆರಂಭಿಸಿರಲಿಲ್ಲ ಎಂದು ಫ್ರಾಂಕೋ ಹೇಳಿದ್ದಾರೆ.
ಆ ಸಮಯದಲ್ಲಿ ನನಗೆ ನನ್ನ ಆಲೋಚನೆಗಳಿಗೆ ಸರಿ ಎನಿಸಿದ್ದನ್ನು ಮಾಡಿಬಿಡುತ್ತಿದ್ದೆ ಎಂದು ಜೇಮ್ಸ್ ಫ್ರಾಂಕೋ ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಲಾಸ್ ಏಂಜಲಿಸ್ ಟೈಮ್ಸ್ನಲ್ಲಿ ಐವರು ಮಹಿಳೆಯರು ಫಾಂಕೋ ವಿರುದ್ಧ ಅನುಚಿತ ವರ್ತನೆ ಆರೋಪ ಹೊರಿಸಿದ್ದಾರೆ ಎಂದು ವರದಿ ಪ್ರಕಟಿಸಿತ್ತು. ತಮ್ಮ ವಿರುದ್ಧ ಹೊರಿಸಲಾದ ಈ ಆರೋಪಗಳ ವಿರುದ್ಧ ಫ್ರಾಂಕೋ ಮೊದಲ ಬಾರಿಗೆ ವಿಸ್ತೃತ ಕಮೆಂಟ್ ನೀಡಿದಂತಾಗಿದೆ.
2019ರ ಅಕ್ಟೋಬರ್ ತಿಂಗಳಿನಲ್ಲಿ ಇಬ್ಬರು ಮಹಿಳೆಯರು ಫ್ರಾಂಕೋ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದರು. ಯುವತಿಯರನ್ನು ಅವರು ಲೈಂಗಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.