ಬ್ರೆಜಿಲ್ ನ ರೂಪದರ್ಶಿಯೊಬ್ಬಳು ಹಲವು ಪುರುಷರಿಂದ ಮೋಸ ಹೋದ ಬಳಿಕ ತನ್ನನ್ನು ತಾನೇ ಮದುವೆಯಾಗಿ ಸುದ್ದಿಯಾಗಿದ್ದಳು. ನಂತರ ಮದುವೆಯಾದ ಮೂರೇ ತಿಂಗಳಿಗೆ ತನಗೆ ತಾನೇ ವಿಚ್ಛೇದನವನ್ನೂ ಕೊಟ್ಟುಕೊಂಡಿರುವ ಸುದ್ದಿಯನ್ನು ಬಹುಶಃ ನೀವು ಕೇಳಿರಬಹುದು.
ಇದೀಗ ಯುಕೆ ಮೂಲದ ಮಹಿಳೆಯೊಬ್ಬಳು ಮೂರು ವರ್ಷಗಳ ಹಿಂದೆ ಮರವನ್ನು ಮದುವೆಯಾಗಿದ್ದು, ತಮ್ಮ ಸಂಬಂಧ ಇನ್ನೂ ಗಟ್ಟಿಯಾಗಿದೆ ಎಂದು ಹೇಳಿದ್ದಾಳೆ.
37 ವರ್ಷದ ಕೇಟ್ ಕನ್ನಿಂಗ್‌ಹ್ಯಾಮ್ 2019 ರಲ್ಲಿ ಯುಕೆ ಯ ಮರ್ಸಿಸೈಡ್‌ನ ಸೆಫ್ಟನ್‌ನಲ್ಲಿ ಮರವನ್ನು ಮದುವೆಯಾದ ನಂತರ ತನ್ನ ಉಪನಾಮ (ಸರ್ ನೇಮ್) ಅನ್ನು ಎಲ್ಡರ್ ಎಂದು ಬದಲಾಯಿಸಿಕೊಂಡಿದ್ದಾಳೆ. ಈಗಾಗಲೇ ಎರಡು ಮಕ್ಕಳ ತಾಯಿಯಾಗಿರುವ ಆಕೆ, ವಾರಕ್ಕೆ ಐದು ಬಾರಿ ಮರವಿರುವ ಜಾಗಕ್ಕೆ ಭೇಟಿ ನೀಡುತ್ತಾಳಂತೆ.
ಅಷ್ಟಕ್ಕೂ ಈಕೆ ಮರವನ್ನು ಮದುವೆಯಾಗಿರುವ ಬಗ್ಗೆ ದೊಡ್ಡ ಕಾರಣವೇ ಇದೆ. ಅದೇನೆಂದ್ರೆ ರಿಮ್ರೋಸ್ ವ್ಯಾಲಿ ಕಂಟ್ರಿ ಪಾರ್ಕ್ ಮೂಲಕ ಬೈಪಾಸ್ ನಿರ್ಮಿಸುವ ಯೋಜನೆಯನ್ನು ವಿರೋಧಿಸಿದ ಕೇಟ್, ಮೂರು ವರ್ಷಗಳ ಹಿಂದೆ ಮರವನ್ನು ವಿವಾಹವಾಗಿದ್ದಾಳೆ. ಹಲವಾರು ವರ್ಷಗಳ ಹಿಂದೆ ಮರಗಳನ್ನು ಮದುವೆಯಾದ ಮೆಕ್ಸಿಕನ್ ಮಹಿಳೆಯರ ಬಗ್ಗೆ ತಿಳಿದ ಆಕೆ ಅವರಿಂದ ಸ್ಪೂರ್ತಿ ಪಡೆದಿದ್ದಾಳೆ.
ಇನ್ನು ಮದುವೆಗೂ ಮುನ್ನ ತಾನು ವಿವಾಹವಾಗಲಿರುವ ಮರವನ್ನು ಹುಡುಕಲು ರಿಮ್ರೋಸ್ ವ್ಯಾಲಿ ಕಂಟ್ರಿ ಪಾರ್ಕ್‌ಗೆ ಕೇಟ್ ಭೇಟಿ ನೀಡಿದ್ದಳು. ತಿಳಿ ತೊಗಟೆ ಬಣ್ಣ ಮತ್ತು ದೊಡ್ಡ ಗಾತ್ರದ ಮರವನ್ನು ಕಂಡು ಕೇಟ್ ಆಕರ್ಷಿತಳಾಗಿ, ಅದನ್ನೇ ವಿವಾಹವಾಗಲು ತೀರ್ಮಾನಿಸಿದ್ದಳು.
ಇದೀಗ ಈ ಜೋಡಿ ಈ ವರ್ಷ ಮೂರನೇ ವರ್ಷದ ಕ್ರಿಸ್ಮಸ್ ಆಚರಿಸಲಿದೆ. ಕೇಟ್, ಹಬ್ಬಕ್ಕಾಗಿ ಮರವನ್ನು ಮಾಲೆ, ಥಳುಕಿನ ಬಣ್ಣ ಮತ್ತು ಬಾಬಲ್‌ಗಳಿಂದ ಅಲಂಕರಿಸಿದ್ದಾಳೆ. ಕೇಟ್ ನಿರ್ಧಾರವನ್ನು ಆಕೆಯ ಕುಟುಂಬ ಮತ್ತು ಸ್ನೇಹಿತರು ಪೂರ್ಣ ಮನಸ್ಸಿನಿಂದ ಬೆಂಬಲಿಸಿದ್ದಾರೆ. ಕೇಟ್ ಗೆಳೆಯ ಕೂಡ ಬೆಂಬಲವಾಗಿ ನಿಂತಿದ್ದಾನೆ.