ಅಂಗಡಿ ಮಾಲೀಕನಿಗೆ ಪೊಲೀಸ್ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆದ ಪರಿಣಾಮ ಪೊಲೀಸ್ ಪೇದೆಯನ್ನು ಸಶಸ್ತ್ರ ಮೀಸಲು ಘಟಕಕ್ಕೆ ವರ್ಗಾವಣೆ ನಡೆಸಿದ ಘಟನೆಯು ತಮಿಳುನಾಡಿನ ತಿರುಪುರದಲ್ಲಿ ನಡೆದಿದೆ.
ತಿರುಪುರದಲ್ಲಿರುವ ಅಂಗಡಿ ಮಾಲೀಕನಿಗೆ ಅಲೆಕ್ಸಾಂಡರ್ ಎಂಬ ಪೊಲೀಸ್ ಬೆದರಿಕೆಯೊಡ್ಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪೊಲೀಸ್ ಅಲೆಕ್ಸಾಂಡರ್ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ.
ಮುತ್ತನಂಪಾಳ್ಯ ಪ್ರದೇಶದಲ್ಲಿ ಜಾಫರ್ ಎಂಬ ಹೆಸರಿನ ವ್ಯಕ್ತಿಯು ಅಂಗಡಿಯನ್ನು ನಡೆಸುತ್ತಿದ್ದ. ಈತನಿಗೆ ಕಿರುಕುಳ ನೀಡಿದ ಆರೋಪವು ಅಲೆಕ್ಸಾಂಡರ್ ಮೇಲೆ ಎದುರಾಗಿದೆ. ಜಾಫರ್ ಅವಿನಾಶಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದಾರೆ.
ಬೈಕ್ ಪಾರ್ಕಿಂಗ್ಗೆ ಅಡ್ಡಿಯಾದ ಹಿನ್ನೆಲೆಯಲ್ಲಿ ಜಾಫರ್ ತನ್ನ ಅಂಗಡಿಯ ಜಾಗವನ್ನು ತೆಗೆದುಕೊಂಡ ಮತ್ತೊಬ್ಬ ಅಂಗಡಿಯ ಮಾಲೀಕನ ಜೊತೆ ಜಗಳವಾಡಿದ್ದರು. ಇದೇ ವೇಳೆ ವೀರಂಪಾಡಿ ಪೊಲೀಸ್ ಠಾಣೆ ಪೇದೆ ಅಲೆಕ್ಸಾಂಡರ್ ಮಧ್ಯಪ್ರವೇಶಿಸಿ ಜಾಫರ್ಗೆ ಬೆದರಿಕೆ ಹಾಕಿದ್ದಾರೆ.
ಜಾಫರ್, ಪೊಲೀಸ್ ಪೇದೆ ಬೆದರಿಕೆ ಹಾಕುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ, ಆದರೆ ಇದಕ್ಕೆ ಅಲೆಕ್ಸಾಂಡರ್ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಜಾಫರ್ ಅಂಗಡಿಯಲ್ಲಿ ಹಾಕಿದ ಸಿಸಿ ಕ್ಯಾಮರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಜಾಫರ್ ಅಂಗಡಿಗೆ ನುಗ್ಗಿದ ಅಲೆಕ್ಸಾಂಡರ್ ನೀನು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀಯಾ ಎಂದು ನಾನೂ ನೋಡುತ್ತೇನೆ. ನಿನ್ನ ಅಂಗಡಿಗೆ ಒಂದೇ ಒಂದು ಗ್ರಾಹಕನು ಸುಳಿಯೋದಿಲ್ಲ ಎಂದು ಹೇಳಿದ್ದಾರೆ.