ಭ್ರಷ್ಟಾಚಾರ ಜನಕ ಕಾಂಗ್ರೆಸ್ ಎಂಬ ಸಿ.ಟಿ. ರವಿ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿ.ಟಿ. ರವಿ ಒಬ್ಬ ಲೂಟಿ ರವಿ ಎಂದು ಕಿಡಿಕಾರಿದ್ದಾರೆ. ನೀನು ಏನು ನನ್ನ ವಿರುದ್ಧ ಆರೋಪ ಮಾಡೋದು ಅಂತಾ ಪ್ರಶ್ನೆ ಮಾಡಿದರು.
ಈ ಲೂಟಿ ರವಿ ನನ್ನ ವಿರುದ್ಧ ಮಾತನಾಡಿ ದೊಡ್ಡ ಲೀಡರ್ ಆಗಬೇಕು ಎಂದುಕೊಂಡಿದ್ದಾರೆ. ಈ ಸಿ.ಟಿ. ರವಿ ಲೂಟಿ ರವಿ ಹೇಗಿದ್ದ ಅನ್ನೋದನ್ನು ಮೊದಲು ಹೇಳಲಿ ಎಂದು ಗುಡುಗಿದರು.
ಚಳಿಗಾಲ ಅಧಿವೇಶನಕ್ಕೂ ಮುನ್ನ ಬೆಳಗಾವಿಯ ಸುವರ್ಣ ಸೌಧದ ಎದುರು ಕಾಂಗ್ರೆಸ್ ಹೈಡ್ರಾಮಾವನ್ನೇ ನಡೆಸಿದೆ. ಪರ್ಸೆಂಟೇಜ್ ಸರ್ಕಾರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕರು ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.
ಟ್ರ್ಯಾಕ್ಟರ್ ಸುವರ್ಣ ಸೌಧ ಪ್ರವೇಶಿಸಲು ಪೊಲೀಸರು ಅನುಮತಿ ನಿರಾಕರಿಸುತ್ತಿದ್ದಂತೆಯೇ ಆಕ್ರೋಶ ವಿಕೋಪಕ್ಕೆ ತಿರುಗಿತ್ತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಕರೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ರ್ಯಾಕ್ಟರ್ ಸಮೇತ ಸುವರ್ಣಸೌಧಕ್ಕೆ ತೆರಳಲು ಅನುಮತಿ ಪಡೆದುಕೊಂಡರು. ಸುಮಾರು ಒಂದೂವರೆ ಗಂಟೆಯ ಹೈಡ್ರಾಮಾದ ಬಳಿಕ ಕಾಂಗ್ರೆಸ್ ನಾಯಕರು ಸುವರ್ಣ ಸೌಧದ ಒಳಗೆ ಎಂಟ್ರಿ ನೀಡಿದರು.