ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕಳ್ಳತನದ ಆರೋಪವನ್ನು ಹೊತ್ತಿದ್ದ ಕುಟುಂಬ ಸದಸ್ಯರು ಪೊಲೀಸರ ನಿರ್ಲಕ್ಷ್ಯದಿಂದಾಗಿ ತಮ್ಮ ಸಾಕು ನಾಯಿ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪುಷ್ಠಿ ನೀಡುವಂತಹ ವಿಡಿಯೋವನ್ನೂ ಕುಟುಂಬ ಸದಸ್ಯರು ರಿಲೀಸ್ ಮಾಡಿದ್ದಾರೆ.
ರೋಹಿಣಿಯ ಬೇಗಂಪುರ ಪ್ರದೇಶದಲ್ಲಿ ದರೋಡೆ ನಡೆಸಿದ ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸ್ ಸಿಬ್ಬಂದಿ ನಮ್ಮ ಮನೆಯಲ್ಲಿ ಶ್ವಾನಗಳ ನಡುವೆ ಜಗಳ ಉಂಟು ಮಾಡಲು ಕಾರಣರಾಗಿದ್ದಾರೆ. ಪಿಟ್ಬುಲ್ ನಾಯಿಯನ್ನು ನಮ್ಮ ಮನೆಯ ನಾಯಿಯೊಂದಿಗೆ ಕಾದಾಟಕ್ಕೆ ಬಿಟ್ಟಿದ್ದಾರೆ. ಪರಿಣಾಮ ನಮ್ಮ ಸಾಕು ಶ್ವಾನ ಸಾವನ್ನಪ್ಪಿದೆ ಎಂದು ಕುಟುಂಬವು ಆರೋಪಿಸಿದೆ.
ಈ ಭೀಕರ ಘಟನೆಯ ವಿಡಿಯೋವನ್ನು ಕುಟುಂಬದ ಸದಸ್ಯರೊಬ್ಬರು ತಮ್ಮ ಫೋನ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಾಯಿಗಳ ನಡುವೆ ಕಾದಾಟ ನಡೆಯುತ್ತಿದ್ದ ವೇಳೆಯಲ್ಲಿ ಪೊಲೀಸರು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಪಿಟ್ಬುಲ್ ಶ್ವಾನವನ್ನು ಹುರಿದುಂಬಿಸುತ್ತಿರೋದನ್ನು ಕಾಣಬಹುದಾಗಿದೆ. ಆರೋಪಿಗಳು ಪೊಲೀಸರ ಬಳಿ ತಮ್ಮ ಶ್ವಾನವನ್ನು ಬಿಡುವಂತೆ ಮನವಿ ಮಾಡುತ್ತಾ ಅಳುತ್ತಿರೋದು ಸಹ ವಿಡಿಯೋದಲ್ಲಿ ಕೇಳುತ್ತಿದೆ.
ಅಲ್ಲದೇ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆಯಲ್ಲಿ ತಮ್ಮ ಬೆನ್ನು ಹಾಗೂ ಎಡಗೈಗೆ ಗಾಯವಾಗುವ ರೀತಿಯಲ್ಲಿ ಪೊಲೀಸರು ಥಳಿಸಿದ್ದಾರೆಂದೂ ಈ ಕುಟುಂಬ ದೂರಿದೆ. ಈ ಎಲ್ಲದರ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಜಂಟಿ ಕಮಿಷನರ್ ಆದೇಶ ಹೊರಡಿಸಿದ್ದಾರೆ.