200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಕರಣ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಇಬ್ಬರು ಬಾಲಿವುಡ್ ನಟಿಯರು ಆರೋಪಿ ಸುಕೇಶ್ನಿಂದ ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ದುಬಾರಿ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಸುಕೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡಿಸ್ ಮೇಕಪ್ ಆರ್ಟಿಸ್ಟ್ ಶಾನ್ ಮುಟ್ಟತ್ತಿಲ್ ಮೂಲಕ ನಟಿಯನ್ನು ಸಂಪರ್ಕಿಸಿದ್ದರು ಎಂದು ಮನಿ ಲ್ಯಾಂಡರಿಂಗ್ ವಿರೋಧಿ ಕಾನೂನಿನ ಅಡಿಯಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಜಾಕ್ವೆಲಿನ್ ವಿದೇಶಕ್ಕೆ ಹಾರುವುದನ್ನು ತಡೆದಿದ್ದ ಇಡಿ ಅಧಿಕಾರಿಗಳು ನಟಿಯನ್ನು ವಿಚಾರಣೆಗೆ ಒಳಪಡಿಸಿದ್ದರು.
ನಟಿ ಜಾಕ್ವೆಲಿನ್ ಆಗಸ್ಟ್ ಹಾಗೂ ಅಕ್ಟೋಬರ್ನಲ್ಲಿ ದಾಖಲಿಸಿದ ಹೇಳಿಕೆಯಲ್ಲಿ ಗುಶ್ಶಿ ಹಾಗೂ ಶನೆಲ್ನಿಂದ 2 ಡಿಸೈನರ್ ಬ್ಯಾಗುಗಳು, 2 ಗುಶ್ಶಿ ಜಿಮ್ ಬಟ್ಟೆ, 1 ಜೋಡಿ ಲ್ಯೂಯಿಸ್ ವಿಟಾನ್ ಶೂಗಳು, 2 ಜೋಡಿ ವಜ್ರದ ಕಿವಿಯೋಲೆ ಹಾಗೂ ಬ್ರೆಸ್ಲೇಟ್ಗಳನ್ನು ಉಡುಗೊರೆ ರೂಪದಲ್ಲಿ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ ಮಿನಿ ಕೂಪರ್ ಕಾರನ್ನು ತಾನು ಸುಕೇಶ್ಗೆ ಹಿಂದಿರುಗಿಸಿದ್ದಾಗಿಯೂ ಇದೇ ವೇಳೆ ಜಾಕ್ವೆಲಿನ್ ಹೇಳಿದ್ದಾರೆ.
ಇನ್ನೊಂದೆಡೆ ಸುಕೇಶ್ ಚಂದ್ರಕುಮಾರ್ ಇಡಿ ವಿಚಾರಣೆಯ ವೇಳೆಯಲ್ಲಿ ತಾನು 7 ಕೋಟಿ ರೂಪಾಯಿ ಮೌಲ್ಯದ ಆಭರಣವನ್ನು ಜಾಕ್ವೆಲಿನ್ಗೆ ನೀಡಿರೋದಾಗಿ ಹೇಳಿದ್ದಾನೆ. ಜೊತೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಜಾಕ್ವೆಲಿನ್ ಸಹೋದರಿಗೆ 1.13 ಕೋಟಿ ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಿದ್ದೇನೆ ಎಂದು ಹೇಳಿದ್ದಾನೆ. ಇದರ ಜೊತೆಯಲ್ಲಿ ಆಕೆಗೆ ಬಿಎಂಡಬ್ಲು ಎಕ್ಸ್ 5 ಕಾರನ್ನು ನೀಡಿರೋದಾಗಿ ಹೇಳಿದ್ದಾನೆ. ಜಾಕ್ವೆಲಿನ್ ತಾಯಿಗೆ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ.