ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆ ಪ್ರಕರಣಗಳು ಮಿತಿಮೀರುತ್ತಿದೆ. ಈ ಜಾಲಕ್ಕೆ ವಿದ್ಯಾವಂತರೇ ಸಿಲುಕಿಹಾಕಿಕೊಳ್ಳುತ್ತಿರೋದು ದುರಂತ. ಇದೀಗ ಈ ಸಾಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಸಹ ಸೇರಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಬಂದ ಕರೆಯನ್ನು ನಂಬಿದ ವಿನೋದ್ ಕಾಂಬ್ಳಿ 1.14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಖಾಸಗಿ ಬ್ಯಾಂಕ್ನ ಎಕ್ಸಿಕ್ಯೂಟಿವ್ ಎಂದು ಪರಿಚಯಿಸಿಕೊಂಡ ವಂಚಕ ನೀವು ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡದೇ ಹೋದಲ್ಲಿ ನಿಮ್ಮ ಎಟಿಎಂ ಕಾರ್ಡ್ಗಳು ಈ ಕೂಡಲೇ ರದ್ದಾಗಲಿವೆ ಎಂದು ಬೆದರಿಸಿದ್ದಾನೆ.
ವಂಚಕನ ಮಾತನ್ನೇ ನಿಜವೆಂದು ನಂಬಿದ ವಿನೋದ್ ಕಾಂಬ್ಳಿ ಕೂಡಲೇ ತಮ್ಮ ಕೆವೈಸಿ ಅಪ್ಡೇಟ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಂಚಕ ಎನಿ ಡೆಸ್ಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದಾನೆ. ವಿನೋದ್ ಕಾಂಬ್ಳಿ ತಮ್ಮ ಸ್ಕ್ರೀನ್ನಲ್ಲಿ ನಮೂದಿಸಿದ ಪ್ರತಿಯೊಂದು ಮಾಹಿತಿಯನ್ನೂ ಎನಿ ಡೆಸ್ಕ್ ಅಪ್ಲಿಕೇಶನ್ ಮೂಲಕ ನೋಡಿದ ವಂಚಕ ಆ ಕೂಡಲೇ ಅನೇಕ ಟ್ರಾನ್ಸಾಕ್ಷನ್ಗಳ ಮೂಲಕ ಒಟ್ಟು 1.14 ಲಕ್ಷ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡು ಕಾಲ್ ಕಟ್ ಮಾಡಿದ್ದಾನೆ.
ತಾನು ವಂಚಕರ ಜಾಲದಲ್ಲಿ ಬಿದ್ದಿದ್ದೇನೆ ಎಂದು ಅರಿವಾದ ತಕ್ಷಣವೇ ಕಾಂಬ್ಳಿ ಸಿಎ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಲ್ಲದೇ ಬಾಂದ್ರಾ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದಾರೆ. ತಕ್ಷಣ ಅಲರ್ಟ್ ಆದ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕಾಂಬ್ಳೆ ಹಣವನ್ನು ಬ್ಯಾಂಕ್ ಅಧಿಕಾರಿಗಳ ಸಹಾಯದಿಂದ ರಿವರ್ಸ್ ಟ್ರಾನ್ಸಾಕ್ಷನ್ ಮಾಡುವ ಮೂಲಕ ವಾಪಸ್ ಸಿಗುವಂತೆ ಮಾಡಿದ್ದಾರೆ.
ಆರೋಪಿ ಕರೆ ಮಾಡಿದ ಮೊಬೈಲ್ ಸಂಖ್ಯೆ ಹಾಗೂ ಹಣ ಟ್ರಾನ್ಸಫರ್ ಮಾಡಿಕೊಂಡ ಬ್ಯಾಂಕ್ ಖಾತೆಯ ವಿವರ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.