ಖಾಸಗಿ ಕ್ರಿಪ್ಟೋಕರೆನ್ಸಿಗಳ ನಿಷೇಧದ ಬದಲಿಗೆ ಅವುಗಳ ಮೇಲೆ ನಿಯಂತ್ರಣ ತರುವ ಸಾಧ್ಯತೆಯ ಹೆಚ್ಚಿದೆ. ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಕ್ರಿಪ್ಟೋಕರೆನ್ಸಿ ಮಸೂದೆ ಈ ಸಂಗತಿಯನ್ನು ಸೂಚಿಸುತ್ತಿದೆ.
ಕ್ರಿಪ್ಟೋಕರೆನ್ಸಿ ಮಸೂದೆ ಕುರಿತಂತೆ ಕೇಂದ್ರ ಸಂಪುಟದ ವಿಶೇಷ ನೋಟ್ ಒಂದರಲ್ಲಿ ಕ್ರಿಪ್ಟೋಕರೆನ್ಸಿಯನ್ನು ಭಾರತದಲ್ಲಿ ಅಧಿಕೃತ ಕರೆನ್ಸಿ ಎಂದು ಪರಿಗಣಿಸಲು ಬರುವುದಿಲ್ಲ ಎನ್ನಲಾಗಿದ್ದು, ಕ್ರಿಪ್ಟೋಕರೆನ್ಸಿಯನ್ನು ’ಕ್ರಿಪ್ಟೋಆಸ್ತಿ’ ಎಂದು ವರ್ಗೀಕರಿಸಲಾಗಿದೆ.
ಕ್ರಿಪ್ಟೋ ಆಸ್ತಿಯನ್ನು ಚಾಲ್ತಿಯಲ್ಲಿರುವ ಕ್ರಿಪ್ಟೋಕರೆನ್ಸಿ ವಿನಿಮಯದ ಪ್ಲಾಟ್ಫಾರಂಗಳ ಮೂಲಕ ವ್ಯವಹರಿಸಲು ಅನುವು ಮಾಡಿಕೊಟ್ಟು, ಭಾರತೀಯ ಸೆಕ್ಯೂರಿಟಿ ವಿನಿಯಮ ಮಂಡಳಿ (ಸೆಬಿ) ಮೂಲಕ ನಿಯಂತ್ರಿಸಲಾಗುವುದು ಎಂದು ಎನ್ಡಿಟಿವಿಯಲ್ಲಿ ಬಿತ್ತರಗೊಂಡ ವರದಿಯಲ್ಲಿ ತಿಳಿದುಬಂದಿದೆ.
ಕ್ರಿಪ್ಟೋಆಸ್ತಿಯ ಸಂಬಂಧಿತ ಶಾಸನಾತ್ಮಕ ನಿಯಮಗಳ ಉಲ್ಲಂಘನೆ ಮಾಡುವ ಮಂದಿಗೆ ಒಂದೂವರೆ ವರ್ಷದವರೆಗೂ ಕಾರಾಗೃಹ ಶಿಕ್ಷೆ ವಿಧಿಸುವ ಸಾಧ್ಯತೆಯನ್ನೂ ಮಸೂದೆಯಲ್ಲಿ ತರಲಾಗಿದೆ. ಕ್ರಿಪ್ಟೋಆಸ್ತಿ ಹೊಂದಿರುವ ಮಂದಿ ಇದೇ ವಿಚಾರವಾಗಿ ಘೋಷಣೆ ಮಾಡಲು ಕೊನೆಯ ದಿನಾಂಕವೊಂದನ್ನು ನಿಗದಿ ಮಾಡಲಾಗುವುದು.
ಇದೇ ವೇಳೆ ರಿಸರ್ವ್ ಬ್ಯಾಂಕ್ ಪರಿಚಯಿಸಲಿರುವ ಡಿಜಿಟಲ್ ಕರೆನ್ಸಿಯನ್ನು ಕ್ರಿಪ್ಟೋಕಾಯಿನ್ ಸಂಬಂಧಿತ ಮಸೂದೆಯಲ್ಲಿ ಉಲ್ಲೇಖಿಸಲಾಗಿಲ್ಲ. ಆದರೆ, ಕ್ರಿಪ್ಟೋಕರೆನ್ಸಿ ಸಂಬಂಧ ಎಲ್ಲ ವಿಚಾರಗಳನ್ನೂ ಆರ್ಬಿಐ ನಿಯಂತ್ರಿಸಲಿದೆ.
ಡಿಜಿಟಲ್ ಕರೆನ್ಸಿಯನ್ನು ’ಬ್ಯಾಂಕ್ ನೋಟ್’ ಎಂಬ ವಿವರಣೆಯಡಿ ಸೇರಿಸಿ, ಅದರ ಮೇಲಿನ ಶಾಸನಾತ್ಮಕ ನಿಯಂತ್ರಣಕ್ಕೆ ಅನುವು ಮಾಡಿಕೊಡಬೇಕೆಂದು ಆರ್.ಬಿ.ಐ.ನಿಂದ ಪ್ರಸ್ತಾವನೆ ಬಂದಿರುವುದಾಗಿ ಎಂದು ಈ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು.