ರಾಜ್ಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಆತಂಕ ದ್ವಿಗುಣಗೊಂಡಿದೆ. ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ಸೋಂಕಿತನ ಟ್ರಾವೆಲ್ ಹಿಸ್ಟರಿಯೇ ಬೆಚ್ಚಿ ಬೀಳಿಸುವಂತಿದೆ.
ಕಳೆದ ತಿಂಗಳ 20ನೇ ತಾರೀಖಿನಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿನ ಏರ್ಪೋರ್ಟ್ಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಹೋಟೆಲ್ನಲ್ಲಿ ಮೂರು ದಿನಗಳ ಕಾಲ ಈ ವಿದೇಶಿ ಪ್ರಜೆ ಕ್ವಾರಂಟೈನ್ನಲ್ಲಿದ್ದರು ಎನ್ನಲಾಗಿದೆ. ಮೂರು ದಿನಗಳ ಬಳಿಕ ಖಾಸಗಿ ಕ್ಲಿನಿಕ್ ಒಂದಲ್ಲಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು.
ಕೋವಿಡ್ ರಿಪೋರ್ಟ್ನಲ್ಲಿ ನೆಗೆಟಿವ್ ಎಂದು ವರದಿ ಬಂದಿದೆ. ಬಳಿಕ ನವೆಂಬರ್ 23ರಂದು ಬೊಮ್ಮಸಂದ್ರದ ಅಡಕಾರ್ ಇಂಗ್ರಾಮ್ ಲಿಮಿಟೆಡ್ ಕಂಪನಿಗೆ ಸೋಂಕಿತ ಭೇಟಿ ನೀಡಿದ್ದಾರೆ. ಕಂಪನಿಯೇ ಕಳುಹಿಸಿದ್ದ ಕ್ಯಾಬ್ ಮೂಲಕ ಹೋಟೆಲ್ನಿಂದ ಕಂಪನಿಗೆ ಆಗಮಿಸಿದ್ದರು. ಕಂಪನಿಯ ಬೋರ್ಡ್ ಮೀಟಿಂಗ್ನಲ್ಲಿಯೂ ಭಾಗಿಯಾಗಿದ್ದರು.
ಇದಾದ ಬಳಿಕ ಬೇರೊಂದು ಕ್ಯಾಬ್ ಮೂಲಕ ಬೆಂಗಳೂರಿನ ಹೋಟೆಲ್ ಕರೆ ತೆರಳಿದ್ದರು. ಇದಾದ ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು.ಈ ವರದಿಯಲ್ಲಿ ಸೋಂಕು ಪಾಸಿಟಿವ್ ಎಂದು ಬಂದಿದೆ. ಕೋವಿಡ್ ವೈರಸ್ ಪರೀಕ್ಷಾ ವರದಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.
ಸೌತ್ ಆಫ್ರಿಕಾ ಪ್ರಜೆಯಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆಯೇ ಕಂಪನಿಯ 60 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನೂ ಆರೋಗ್ಯ ಇಲಾಖೆ ತಪಾಸಣೆ ಮಾಡುತ್ತಿದೆ. ಆದರೆ ಎಲ್ಲ ವರದಿ ನೆಗೆಟಿವ್ ಬಂದಿದ್ದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿದ್ದ ಆತಂಕ ದೂರಾಗಿದೆ.
ದಕ್ಷಿಣ ಆಫ್ರಿಕಾ ಪ್ರಜೆಯ ಲ್ಯಾಬ್ ರಿಪೋರ್ಟ್ನಲ್ಲಿ ಓಮಿಕ್ರಾನ್ ರೂಪಾಂತರಿ ಇರುವುದು ದೃಢಪಟ್ಟಿದೆ. ಇದರಿಂದ ರಾಜ್ಯದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್ನಲ್ಲಿ ಇರಿಸಿದೆ. ಸದ್ಯ ಕ್ಯಾಬ್ ಚಾಲಕನನ್ನು ಹುಡುಕುವ ಕೆಲಸ ಮಾಡಲಾಗ್ತಿದೆ.