ಮದ್ಯಪಾನ ನಿಷೇಧದ ಅಭಿಯಾನಕ್ಕೆ ಮುಂದಾಗಿರುವ ಬಿಹಾರದಲ್ಲಿ, ಅಲ್ಲಿನ ಪೊಲೀಸ್ ಮುಖ್ಯಸ್ಥ ಎಸ್.ಕೆ. ಸಿಂಘಲ್ ತಮ್ಮ ಇಲಾಖೆಯ ಎಲ್ಲಾ ಸಿಬ್ಬಂದಿಗೂ ಆಸಕ್ತಿದಾಯಕವಾದ ಪ್ರಮಾಣವಚನವೊಂದನ್ನು ಬೋಧಿಸಿದ್ದಾರೆ.
ಪಟನಾದಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಿಂದ ಮಾತನಾಡುತ್ತಾ ಇಲಾಖೆಯ ತಮ್ಮೆಲ್ಲಾ ಸಹೋದ್ಯೋಗಿಗಳಿಗೆ ಜೀವನದುದ್ದಕ್ಕೂ ಮದ್ಯಪಾನದಿಂದ ದೂರ ಉಳಿಯಲು ಪ್ರಮಾಣವಚನ ಬೋಧಿಸಿದ ಸಿಂಘಲ್, ರಾಜ್ಯದಲ್ಲಿ ಮದ್ಯಪಾನ ನಿಷೇಧವನ್ನು ಕಠಿಣವಾಗಿ ಅನುಷ್ಠಾನಕ್ಕೆ ತರುವುದನ್ನು ಖಾತ್ರಿಪಡಿಸಲು ಕೋರಿದ್ದಾರೆ.
ಮದ್ಯಪಾನ ಮಾಡೋದಿಲ್ಲ ಎಂದು ಕೊಟ್ಟ ಮಾತಿಗೆ ತಪ್ಪುವ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸುವಂಥ ಕಠಿಣ ಶಿಕ್ಷೆ ವಿಧಿಸುವ ವಿಚಾರವನ್ನೂ ಸಹ ಸಿಂಘಲ್ ಇದೇ ವೇಳೆ ಮಾತನಾಡಿದ್ದಾರೆ.
Big News: ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ
“ಸಂದೀಪ್ ಕುಮಾರ್ ಸಿಂಘಲ್ ಆದ ನಾನು, ಇಂದು ನವೆಂಬರ್ 26ರಂದು, ನನ್ನ ಜೀವನದುದ್ದಕ್ಕೂ ಮದ್ಯಪಾನ ಮಾಡುವುದಿಲ್ಲವೆಂದು ಸಂಪೂರ್ಣ ಹೊಣೆಗಾರಿಕೆಯಿಂದ ಹೇಳುತ್ತಿದ್ದೇನೆ. ನಾನು ಕರ್ತವ್ಯದಲ್ಲಿರಲಿ ಅಥವಾ ಇಲ್ಲದಿರಲಿ, ನನ್ನ ದಿನನಿತ್ಯದ ಬದುಕಿನಲ್ಲೂ ಸಹ ಮದ್ಯ ಒಳಗೊಂಡ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ. ರಾಜ್ಯದಲ್ಲಿ ಮದ್ಯಪಾನ ನಿಷೇಧದ ಅನುಷ್ಠಾನವನ್ನೂ ಸಹ ಸಮರ್ಪಕವಾಗಿ ಮಾಡುತ್ತೇನೆಂದು ಖಾತ್ರಿ ನೀಡುತ್ತೇನೆ,” ಎಂದು ಸಿಂಘಲ್ ಪ್ರಮಾಣವಚನದ ವೇಳೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಇಂಥದ್ದೇ ಪ್ರಮಾಣವಚನವನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ರಾಜ್ಯ ಸರ್ಕಾರದ ಎಲ್ಲಾ ನೌಕರರು ತೆಗೆದುಕೊಂಡಿದ್ದಾರೆ.