ಸಾವರಿನ್ ಚಿನ್ನದ ಬಾಂಡ್ ಯೋಜನೆಯ 8ನೇ ಸರಣಿ ಸಂದರ್ಭದಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ 4,791 ರೂ.ನಂತೆ ದರ ನಿಗದಿ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಶುಕ್ರವಾರ ಘೋಷಿಸಿದೆ.
ನವೆಂಬರ್ 29ರಿಂದ ಆರಂಭಗೊಂಡು ಈ ಯೋಜನೆಯು ಐದು ದಿನಗಳ ಮಟ್ಟಿಗೆ ಚಂದಾದಾರಿಕೆಗೆ ಮುಕ್ತವಾಗಿರಲಿದೆ. ಸಾವರಿನ್ ಚಿನ್ನದ ಬಾಂಡ್ ಯೋಜನೆ ಮೇಲೆ ತಮ್ಮ ಹಣ ಹೂಡಲು ಚಿಂತಿಸುತ್ತಿರುವ ಹೂಡಿಕೆದಾರರು ಮುಂದಿನ ಸೋಮವಾರದಿಂದ ಶುಕ್ರವಾರದವರೆಗೂ ಹೂಡಿಕೆ ಮಾಡಬಹುದಾಗಿದೆ.
ಇದೇ ಯೋಜನೆಯ 7ನೇ ಸರಣಿಯ ಸಂದರ್ಭದಲ್ಲಿ ಚಿನ್ನದ ದರವನ್ನು ಪ್ರತಿ ಗ್ರಾಂಗೆ 4,761 ರೂ.ನಂತೆ ನಿಗದಿ ಮಾಡಲಾಗಿತ್ತು.
ಆನ್ಲೈನ್ ಮೂಲಕ ಚಂದಾದಾರಾಗುವ ಮಂದಿಗೆ ಪ್ರತಿ ಗ್ರಾಂ ಚಿನ್ನದ ಮೇಲೆ 50 ರೂ.ಗಳ ರಿಯಾಯಿತಿ ಸಿಗಲಿದೆ. ಭಾರತ ಸರ್ಕಾರದ ಈ ರಿಯಾಯಿತಿ ಆಫರ್ ಅನ್ನು ಪಡೆದುಕೊಳ್ಳಲು ಹೂಡಿಕೆದಾರರು ಡಿಜಿಟಲ್ ಮೋಡ್ನಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ.
ಭಾರತ ಸರ್ಕಾರದ ಪರವಾಗಿ ಕೇಂದ್ರ ಬ್ಯಾಂಕ್ ಬಾಂಡ್ಗಳನ್ನು ವಿತರಿಸಲಿದೆ. ದೇಶದ ಎಲ್ಲಾ ಮುಂಚೂಣಿ ಬ್ಯಾಂಕುಗಳಲ್ಲೂ ಬಾಂಡ್ಗಳು ಸಾರ್ವಜನಿಕ ಖರೀದಿಗೆ ಲಭ್ಯವಿವೆ.
ಭಾರತೀಯ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ನಿಯಮಿತ, ನಿರ್ದಿಷ್ಟ ಅಂಚೆ ಕಚೇರಿಗಳು, ಎನ್ಎಸ್ಇ ಹಾಗೂ ಬಿಎಸ್ಇಗಳ ಮೂಲಕವೂ ಹೂಡಿಕೆದಾರರು ಬಾಂಡ್ಗಳನ್ನು ಖರೀದಿ ಮಾಡಬಹುದಾಗಿದೆ.