ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಶುಕ್ರವಾರ ಷೇರು ಮಾರುಕಟ್ಟೆಯ ಗೂಳಿ ಓಟ ನಿಲ್ಲಿಸುವವರೆಗೂ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಯ ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಈ ಸ್ಥಾನಕ್ಕೆ ಮುಖೇಶ್ ಅಂಬಾನಿಗೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವ್ಯಾಪಕ ಪೈಪೋಟಿ ನೀಡಿದ್ದರು.
91.4 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಮುಖೇಶ್ ಅಂಬಾನಿ ಬ್ಲೂಮ್ಬರ್ಗ್ ಬಿಲಿಯೇನರ್ಸ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಅದಾನಿ 78.1 ಶತಕೋಟಿ ಡಾಲರ್ ಸಂಪತ್ತು ಹೊಂದುವ ಮೂಲಕ ಈ ಪಟ್ಟಿಯಲ್ಲಿ 13ನೇ ಸ್ಥಾನವನ್ನು ಪಡೆದಿದ್ದಾರೆ.
ಶ್ರೀಮಂತರ ಪಟ್ಟಿಯಲ್ಲಿನ ಸ್ಥಾನಗಳು ಆಗಾಗ ಬದಲಾವಣೆಯಾಗುತ್ತಲೇ ಇರುತ್ತದೆ. ಉದ್ಯಮಿಗಳು ಪಟ್ಟಿ ಮಾಡಿರುವ ಘಟಕಗಳ ಸ್ಟಾಕ್ ಬೆಲೆ ಹಾಗೂ ಈ ಕಂಪನಿಗಳಲ್ಲಿ ಅವರ ಪಾಲನ್ನು ಆಧರಿಸಿ ನಿವ್ವಳ ಮೌಲ್ಯವನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ಕಳೆದ ವರ್ಷ ಮೇ ತಿಂಗಳಿನಿಂದ ಗೌತಮ್ ಅದಾನಿ ವಿಶ್ವದ ಶ್ರೀಮಂತರ ಸ್ಥಾನದ ಪಟ್ಟಿಯಲ್ಲಿ ಏರುವ ಮೂಲಕ ಅಂಬಾನಿಗೆ ಪ್ರಬಲ ಪೈಪೋಟಿ ನೀಡುತ್ತಲೇ ಬಂದಿದ್ದಾರೆ. ಆದರೆ ವಿಶ್ಲೇಷಕರು ನೀಡುವ ಮಾಹಿತಿಯ ಪ್ರಕಾರ ಅದಾನಿ ಗ್ರೂಪ್ ಕಂಪನಿಗಿಂತ ರಿಲಯನ್ಸ್ ಇಂಡಸ್ಟ್ರೀಸ್ ಮೂರು ಪಟ್ಟು ದೊಡ್ಡದಾಗಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಪವರ್, ಅದಾನಿ ಪೋರ್ಟ್ಸ್ನ ಷೇರುಗಳು ಕಳೆದ ಕೆಲ ವರ್ಷಗಳಿಂದ ಹಲವು ಪಟ್ಟು ಏರಿಕೆ ಕಂಡಿದೆ.