ಬೆಳಗಾವಿ: ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಅಖಾಡ ರಂಗೇರಿದ್ದು, ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪರೋಕ್ಷ ವಾಕ್ಸಮರ ತಾರಕಕ್ಕೇರಿದೆ.
ಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿಹೋಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೋಳಿ ಸ್ಪರ್ಧೆ ಬಗ್ಗೆ ಮಾದ್ಯಮಗಳು ಕೇಳಿದ ಪ್ರಶ್ನೆಗೆ ಲಕ್ಷ್ಮಿ ಹೆಬ್ಬಾಕರ್ ಹೆಸರು ಕೇಳುತ್ತಲೇ ಥೂ.. ಥೂ.. ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆಗೆ ಇದೀಗ ಹೆಬ್ಬಾಳ್ಕರ್ ಟಾಂಗ್ ನೀಡಿದ್ದಾರೆ.
ಟ್ರ್ಯಾಕ್ಟರ್ನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ಬಾಲಕಿ ಎಂಟ್ರಿ
ಬೈಲಹೊಂಗಲದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಥೂ.. ಥೂ.. ಎನ್ನಲು ನಾನು ಏನು ಮಾಡಿದ್ದೇನೆ. ನಾನು ನನ್ನ ಪಕ್ಷದಲ್ಲಿ ಬೆಳೆಯುವುದು ಬೇಡವೇ? ಒಬ್ಬ ಹೆಣ್ಣು ಮಗಳಿಗೆ…ಲಿಂಗಾಯಿತ ಸಮಾಜದ ಹೆಣ್ಣು ಮಗಳಿಗೆ ಹೀಗೆ ಹೇಳುತ್ತಿರುವುದು ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅಪಮಾನ. ಬೆಳಗಾವಿ ಜಿಲ್ಲಾ ರಾಜಕಾರಣ ಯಾವ ದಿಕ್ಕಿನತ್ತ ಸಾಗುತ್ತಿದೆ? ಎಂದು ತಿರುಗೇಟು ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಚುನಾವಣೆ ನಡೆಯುತ್ತಿದೆ. ಸತೀಶ್ ಜಾರಕಿಹೊಳಿಯವರೇ ಮಾಸ್ಟರ್ ಮೈಂಡ್. ಆದರೆ ರಮೇಶ್ ಜಾರಕಿಹೊಳಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಮುಂದೆ ಮಂತ್ರಿಯಾದಾಗ ನೋಡಿಕೊಳ್ಳುತ್ತೇನೆ ಎಂದು ಮತದಾರರನ್ನು ಹೆದರಿಸಲಾಗುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಬಿಜೆಪಿಯಿಂದ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಸಲಾಗಿದೆ.
ಆದರೂ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಅವರನ್ನು ಕಣಕ್ಕಿಳಿಸಿದ್ದಾರೆ. ಮೂರನೇಯವರದ್ದು ಏನು ಕೆಲಸ? ನಮ್ಮ ಪಕ್ಷದಲ್ಲಿದ್ದು ನಮಗೆ ಅನ್ಯಾಯ ಮಾಡಿದರು. ಈಗ ಬಿಜೆಪಿಯಲ್ಲಿದ್ದು ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸುವುದು ಅವರ ಗುರಿ. ಇವರಿಗೆ ನಾನೇನು ಮಾಡಿದ್ದೇನೆ? ಎಂದು ವಾಗ್ದಾಳಿ ನಡೆಸಿದರು.