ನವದೆಹಲಿ: ಕಳೆದ ಕೆಲವು ವಾರಗಳಲ್ಲಿ ಟೊಮೆಟೊ ಬೆಲೆ ತೀವ್ರ ಏರಿಕೆ ಕಂಡಿದೆ. ಚೆನ್ನೈ, ಹೈದರಾಬಾದ್, ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿ ದಾಟಿದೆ.
ದೇಶದಲ್ಲಿನ ಹಲವಾರು ರಾಜ್ಯಗಳಾದ್ಯಂತ ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ತ್ವರಿತ ಏರಿಕೆಗೆ ಸಾಕ್ಷಿಯಾಗಿದೆ, ಇದು ಈಗಾಗಲೇ ಇಂಧನ ಮತ್ತು ಅನಿಲ ದರ ಹೆಚ್ಚಳದಿಂದ ಮೊದಲೇ ಸಂಕಷ್ಟದಲ್ಲಿರುವ ಕುಟುಂಬಗಳ ಮೇಲೆ ಹೆಚ್ಚಿನ ಹೊರೆಗೆ ಕಾರಣವಾಗಿದೆ.
ಆಲೂಗೆಡ್ಡೆ ಮತ್ತು ಈರುಳ್ಳಿಯಂತಹ ಇತರ ಪ್ರಮುಖ ತರಕಾರಿಗಳ ಬೆಲೆಗಳು ಸಹ ಏರಿಕೆಯಾಗಿದ್ದರೂ, ಟೊಮೆಟೊ ಬೆಲೆ ಕಿಲೋಗೆ 100 ರೂ. ದಾಟಿರುವುದರಿಂದ ಆತಂಕ ತಂದಿದೆ. ಅಖಿಲ ಭಾರತ ಮಟ್ಟದಲ್ಲಿ ಟೊಮೆಟೊ ಸರಾಸರಿ ಬೆಲೆ ಕಿಲೋಗೆ 54 ರೂ.ಗಿಂತ ಹೆಚ್ಚಾಗಿದೆ.
ದಕ್ಷಿಣದ ರಾಜ್ಯಗಳಲ್ಲಿ ಬೆಲೆ ಏರಿಕೆ ಹೆಚ್ಚಾಗಿದ್ದು, ತರಕಾರಿ ಬೆಲೆ ಸರಾಸರಿ ಶೇ.40 ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.
ಚೆನ್ನೈನಲ್ಲಿ ಪ್ರತಿ ಕಿಲೋಗೆ ಚಿಲ್ಲರೆ ದರ ಸುಮಾರು 160 ರೂ.ಗೆ ಮಾರಾಟವಾಗಿದೆ. ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಕಿಲೋಗೆ 130 ರೂ.ಮತ್ತು ಕರ್ನಾಟಕದಲ್ಲಿ 90-120 ರೂ.ಗಿಂತಲೂ ಜಾಸ್ತಿ ದರ ಇದೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಟೊಮೆಟೊ ದರ ದಿಢೀರ್ ಜಿಗಿದಿದ್ದು, ಕಿಲೋಗೆ 100 ರೂ. ದೆಹಲಿ-ಎನ್ಸಿಆರ್ನಾದ್ಯಂತ ಇದೇ ರೀತಿಯ ಏರಿಕೆ ಕಂಡುಬಂದಿದೆ. ಟೊಮೆಟೊ ಸಗಟು ಬೆಲೆ ಕಿಲೋಗೆ 70 ರೂ.ಗೆ ಏರಿದ್ದು, ಚಿಲ್ಲರೆ ದರ ಕಿಲೋಗೆ 100 ರೂ.ಗಿಂತಲೂ ಜಾಸ್ತಿ ಇದೆ.
ಹೆಚ್ಚಿನ ಅನಿಲ ಮತ್ತು ಇಂಧನ ಬೆಲೆಗಳಿಂದಾಗಿ ಮನೆಯ ಬಜೆಟ್ಗಳು ಈಗಾಗಲೇ ಹೆಚ್ಚಳವಾಗಿದ್ದು, ಟೊಮೆಟೊ ಬೆಲೆಯಲ್ಲಿನ ತೀವ್ರ ಏರಿಕೆಯು ದೇಶಾದ್ಯಂತದ ಕುಟುಂಬಗಳಿಗೆ ಭಾರಿ ಹೊಡೆತ ನೀಡಿದೆ.
ಮಳೆಯಿಂದ ಬೆಳೆ ಹಾನಿಯಾಗಿದ್ದು, ಡೀಸೆಲ್ ಬೆಲೆ ಏರಿಕೆ, ಮದುವೆ ಸೀಸನ್ ನಲ್ಲಿ ಹೆಚ್ಚಿನ ಬೇಡಿಕೆ ಮೊದಲಾದ ಕಾರಣದಿಂದ ಟೊಮೇಟೊ ಬೆಲೆಯೂ ಏರಿಕೆಯಾಗಿದೆ.
ಆದಾಗ್ಯೂ, ಪರಿಸ್ಥಿತಿಯನ್ನು ನಿವಾರಿಸಲು ರಾಜ್ಯ ಸರ್ಕಾರಗಳು ಮುಂದಾಗಿರುವುದರಿಂದ ಬಿಕ್ಕಟ್ಟು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ಮಾರಾಟಗಾರರು ಹೇಳಿದ್ದಾರೆ. ಮಾರಾಟಗಾರರು ಮತ್ತು ಸಗಟು ಮಾರುಕಟ್ಟೆಗಳ ಪ್ರಕಾರ ತಾಜಾ ಬೆಳೆಗಳ ಆಗಮನದ ನಂತರ ಬೆಲೆಯಲ್ಲಿ ಇಳಿಕೆಯಾಗಬಹುದು.
ಕೇವಲ ಟೊಮೆಟೊ ಅಲ್ಲ:
ಟೊಮೆಟೊ ದರ ದಿಢೀರ್ ಏರಿಕೆಯಿಂದ ಗಮನ ಸೆಳೆದಿದ್ದರೆ, ಇತರೆ ತರಕಾರಿ ಬೆಲೆಯೂ ಏರಿಕೆ ಕಾಣುತ್ತಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ಆಲೂಗೆಡ್ಡೆಯ ಅಖಿಲ ಭಾರತ ಸರಾಸರಿ ಮಾಸಿಕ ಬೆಲೆ 10 ತಿಂಗಳ ಗರಿಷ್ಠ ಮತ್ತು ಈರುಳ್ಳಿ ಬೆಲೆ ಒಂಬತ್ತು ತಿಂಗಳ ಗರಿಷ್ಠ ಮಟ್ಟದಲ್ಲಿದೆ.
ಅಕಾಲಿಕ ಮಳೆಯಿಂದ ಉಂಟಾದ ಬೆಳೆ ಹಾನಿಯಿಂದಾಗಿ ಡೀಸೆಲ್ ಬೆಲೆ ಏರಿಕೆ ಮತ್ತು ಪೂರೈಕೆ ಕೊರತೆಯಿಂದಾಗಿ ಪ್ರಮುಖ ತರಕಾರಿಗಳಾದ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಕೇರ್ ರೇಟಿಂಗ್ಸ್ ವರದಿಯ ಪ್ರಕಾರ, ದೇಶದಲ್ಲಿ ಅಕಾಲಿಕ ಮಳೆ ಮತ್ತು ಹೆಚ್ಚಿನ ಸಾರಿಗೆ ವೆಚ್ಚದಿಂದಾಗಿ ತರಕಾರಿಗಳ ಸಗಟು ಬೆಲೆಗಳು ಕೂಡ ಏರಿಕೆಯಾಗಿದೆ.