ಮೇಘಾಲಯದಲ್ಲಿರುವ 17 ಕಾಂಗ್ರೆಸ್ ಶಾಸಕರ ಪೈಕಿ ಮಾಜಿ ಸಿಎಂ ಮುಕುಲ್ ಸಂಗ್ಮಾ ಸೇರಿದಂತೆ 11 ಮಂದಿ ಶಾಸಕರು ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್ಗೆ ಬಿಗ್ ಶಾಕ್ ಎದುರಾದಂತಾಗಿದೆ.
ಈ ಮೂಲಕ ಪಶ್ಚಿಮ ಬಂಗಾಳದ ಆಢಳಿತಾರೂಢ ತೃಣಮೂಲ ಕಾಂಗ್ರೆಸ್ಗೆ ಮೇಘಾಲಯದಲ್ಲಿ ದೊಡ್ಡ ಮುನ್ನಡೆ ಸಿಕ್ಕಂತಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಮೇಘಾಲಯ ವಿಧಾನಸಭಾ ಸ್ಪೀಕರ್ ಮೆಟ್ಬಾ ಲಿಂಗೋಹ್ರಿಗೆ ಕಾಂಗ್ರೆಸ್ ಶಾಸಕರು ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಕೀರ್ತಿ ಆಜಾದ್ ಹಾಗೂ ಅಶೋಕ್ ತನ್ವಾರ್ ಹಾಗೂ ಜನತಾ ದಳ(ಯುನೈಟೆಡ್)ದ ಮಾಜಿ ನಾಯಕ ಪವನ್ ವರ್ಮಾ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ ಬಾವುಟ ಹಿಡಿದ ಒಂದು ದಿನದ ಬಳಿಕ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ದೆಹಲಿಗೆ ಭೇಟಿ ನೀಡಲಿದ್ದಾರೆ.
ಈ ಬೆಳವಣಿಗೆ ನಡೆಯುವ ಕೆಲವೇ ಗಂಟೆಗಳ ಮುನ್ನ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಟಿಎಂಸಿಯ ಹೋರಾಟದಲ್ಲಿ ಯಾರ್ಯಾರು ಟಿಎಂಸಿ ಸೇರಲು ಬಯಸುತ್ತಾರೋ ಅವರಿಗೆ ನಮ್ಮ ಪಕ್ಷವು ಸ್ವಾಗತಿಸುತ್ತದೆ ಎಂದು ಹೇಳಿದ್ದರು.