ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಭಾರತದ ಟೀನೇಜರ್ ಒಬ್ಬ ಬಾಂಗ್ಲಾದೇಶದ ಗಡಿಯಲ್ಲಿರುವ ಕುಶಿಯಾರಾ ನದಿಯನ್ನು ಈಜಿ ದಾಟಿಕೊಂಡು ದಡದ ಆ ಕಡೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ದೇಶಗಳ ನಡುವಿನ ಗಡಿಯ ಈ ಭಾಗವನ್ನು ನದಿಯ ಆಧಾರದ ಮೇಲೆ ಪ್ರತ್ಯೇಕಿಸಲಾಗಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ಗಡಿಯ ಕಾವಲಿನ ಹೊಣೆ ಹೊತ್ತಿದೆ. 17 ವರ್ಷದ ಈ ಬಾಲಕನನ್ನು ಪತ್ತೆ ಮಾಡಲು ಭಾರತ ಹಾಗೂ ಬಾಂಗ್ಲಾದೇಶದ ಗಡಿ ಕಾವಲು ಪಡೆಗಳು ಮುಂದಾಗಿವೆ.
ಇಲ್ಲಿನ ಕರೀಂಗಂಜ್ ಜಿಲ್ಲಾ ಪೊಲೀಸ್ ಪ್ರಕಾರ, ಅಭಿಜಿತ್ ದಾಸ್ ಎಂಬ ಹೆಸರಿನ ಈ ಬಾಲಕ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಬಜ಼ಾರಿಚೆರ‍್ರಾ ಪೊಲೀಸ್ ಠಾಣಾ ವ್ಯಾಪ್ತಿಯವನಾಗಿದ್ದಾನೆ. ನವೆಂಬರ್ 18ರಿಂದ ಕಾಣೆಯಾಗಿದ್ದ ದಾಸ್ ನಾಪತ್ತೆಯಾಗಿರುವ ವಿಚಾರವನ್ನು ಆತನ ಹೆತ್ತವರು ಪೊಲೀಸರ ಗಮನಕ್ಕೆ ತಂದಿದ್ದರು. ಕರೀಂಗಂಜ್ ಪಟ್ಟಣದ ಬಳಿ ನದಿಗೆ ಧುಮುಕಿದ ದಾಸ್ ದೇಶದ ಗಡಿ ದಾಟಿದ್ದಾನೆ ಎನ್ನಲಾಗಿದೆ.
‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್
“ಏನಾಗುತ್ತಿದೆ ಎಂದು ನಾವು ಅರಿಯುವ ಮುನ್ನವೇ ಬಾಲಕ ಗಡಿ ದಾಟಿಬಿಟ್ಟಿದ್ದಾನೆ. ಕೂಡಲೇ ನಾವು ಬಾಂಗ್ಲಾದೇಶದ ಭದ್ರತಾ ಏಜೆನ್ಸಿಗಳಿಗೆ ವಿಷಯ ಮುಟ್ಟಿಸಿದ್ದು, ಅವರು ಬಾಲಕನನ್ನು ತಡೆಯುವುದಾಗಿ ನಮಗೆ ಭರವಸೆ ಕೊಟ್ಟಿದ್ದಾರೆ. ಆದರೆ ಬಾಲಕ ಆ ದೇಶದ ಯಾವುದೋ ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆ. ನಾವು ಆತನನ್ನು ಪತ್ತೆ ಮಾಡಿ ಶೀಘ್ರವೇ ಮರಳಿ ತರಲಿದ್ದೇವೆ,” ಎಂದು ಕರ್ತವ್ಯದಲ್ಲಿರುವ ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಜಾಗದಲ್ಲಿ ನದಿಯೇ ಗಡಿಯಾಗಿರುವ ಕಾರಣ ಬೇಲಿ ಹಾಕಲು ಸಾಧ್ಯವಾಗಿಲ್ಲ. ಬಿಎಸ್‌ಎಫ್ ತುಕಡಿಗಳು ಕಾವಲು ಕಾಯುತ್ತಿರುವ ನಡುವೆಯೇ ಕಾವಲುಗಾರರು ಇಲ್ಲದ ಸ್ಥಳವನ್ನು ಆಯ್ದುಕೊಂಡ ಬಾಲಕ ನದಿಯಲ್ಲಿ ಈಜಿಕೊಂಡು ಗಡಿಯ ಆ ಭಾಗಕ್ಕೆ ಹೋಗಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.