ಸಾಕಷ್ಟು ವಿರೋಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯು ರಾಮಾಯಣ ಎಕ್ಸ್ಪ್ರೆಸ್ನ ಸಿಬ್ಬಂದಿಗೆ ಹೊಸದಾಗಿ ನೀಡಿದ್ದ ಕೇಸರಿ ಬಣ್ಣದ ಡ್ರೆಸ್ಕೋಡ್ನ್ನು ವಾಪಸ್ ಪಡೆದಿದೆ. ಪ್ರಯಾಣಿಕರಿಗೆ ಸೇವೆ ನೀಡುವ ಸಿಬ್ಬಂದಿಯು ಕೇಸರಿ ಬಣ್ಣದ ವಸ್ತ್ರ ಹಾಗೂ ರುದ್ರಾಕ್ಷಿ ಮಾಲೆ ಧರಿಸಿದ್ದು ಹಿಂದೂ ಧರ್ಮಕ್ಕೆ ಅವಮಾನ ಎಂದು ಉಜ್ಜಯಿನಿಯ ಶ್ರೀಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ರಾಮಾಯಣ ಎಕ್ಸ್ಪ್ರೆಸ್ನ ಸೇವಾ ಸಿಬ್ಬಂದಿಯ ಡ್ರೆಸ್ಕೋಡ್ನ್ನು ಸಂಪೂರ್ಣವಾಗಿ ಬದಲಾಯಿಸಿದ್ದೇವೆ. ಡ್ರೆಸ್ಕೋಡ್ನಿಂದ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.
ಇದಕ್ಕೂ ಮೊದಲು ಐಆರ್ಸಿಟಿಸಿ ನಿನ್ನೆಯಷ್ಟೇ ರಾಮಾಯಣ ಎಕ್ಸ್ಪ್ರೆಸ್ನಲ್ಲಿರುವ ಸೇವಾ ಸಿಬ್ಬಂದಿಯ ಕೇಸರಿ ಉಡುಪನ್ನು ಬದಲಾಯಿಸೋದಾಗಿ ಹೇಳಿತ್ತು.
ರಾಮಾಯಣ ಎಕ್ಸ್ಪ್ರೆಸ್ನಲ್ಲಿ ವೇಟರ್ ಕೆಲಸ ಮಾಡುವ ಸಿಬ್ಬಂದಿ ಕೇಸರಿ ಬಣ್ಣದ ವಸ್ತ್ರ ಹಾಗೂ ರುದ್ರಾಕ್ಷಿ ಮಾಲೆಗಳನ್ನು ಧರಿಸಿ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವುದು ಸಾಕಷ್ಟು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನವಾಗಿದೆ. ಈ ಡ್ರೆಸ್ಕೋಡ್ ವಾಪಸ್ ಪಡೆಯದೇ ಇದ್ದಲ್ಲಿ ಡಿಸೆಂಬರ್ 12ರಂದು ದೆಹಲಿಯಲ್ಲಿ ರೈಲು ತಡೆ ಹಿಡಿಯಲಿದ್ದೇವೆ ಎಂದು ಎಚ್ಚರಿಕೆ ನೀಡಲಾಗಿತ್ತು.