
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಅವಧಿಯಲ್ಲಿ ರೈಲುಗಳಲ್ಲಿ ಜನದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಐಆರ್ಸಿಟಿಸಿ ಕೇಂದ್ರ ರೈಲ್ವೆ ಇಲಾಖೆಯೊಂದಿಗೆ ಸೇರಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಘೋಷಣೆ ಮಾಡಿದೆ.
ಶುಕ್ರವಾರದಂದು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು ಇಂದಿನಿಂದ ರೈಲುಗಳ ಬುಕ್ಕಿಂಗ್ ಆರಂಭವಾಗಲಿದೆ ಎಂದು ಹೇಳಿದೆ.
ರೈಲು ಸಂಖ್ಯೆ 01596 ಮಡಂಗಾವ್ – ಪನ್ವೆಲ್ ವಿಶೇಷ ರೈಲು ನವೆಂಬರ್ 21ರಿಂದ ಜನವರಿ 2ನೇ ತಾರೀಖಿನವರೆಗೆ ಪ್ರತಿ ಭಾನುವಾರ ಸಂಜೆ ನಾಲ್ಕು ಗಂಟೆಗೆ ಮಡಗಾಂವ್ನಿಂದ ಹೊರಟು ಮಾರನೇ ದಿನ ಮುಂಜಾನೆ 3:15ಕ್ಕೆ ಪನ್ವೆಲ್ ತಲುಪುತ್ತದೆ.
ರೈಲು ಸಂಖ್ಯೆ 01595 ಪನ್ವೆಲ್ – ಮಡಗಾಂವ್ ವಿಶೇಷ ರೈಲು ಪನ್ವೇಲ್ನಿಂದ ಮುಂಜಾನೆ 06:05ಕ್ಕೆ ಹೊರಡಲಿದೆ. ನವೆಂಬರ್ 22ರಿಂದ ಜನವರಿ 3ರವರೆಗೆ ಪ್ರತಿ ಸೋಮವಾರ ಹೊರಡುವ ಈ ರೈಲು ಅದೇ ದಿನ ಸಂಜೆ 06:45ಕ್ಕೆ ಮಡಗಾಂವ್ ತಲುಪಲಿದೆ.
ಈ ರೈಲು ಕರ್ಮಾಲಿ, ಥಿವಿಮ್, ಸಾವಂತವಾಡಿ ರಸ್ತೆ, ಕುಡಾಲ್, ಸಿಂಧುದುರ್ಗ, ಕಂಕಾವಲಿ, ವೈಭವ್ವಾಡಿ ರಸ್ತೆ, ರಾಜಾಪುರ ರಸ್ತೆ, ಅದಾವಲಿ, ರತ್ನಗಿರಿ, ಸಂಗಮೇಶ್ವರ ರಸ್ತೆ, ಸವಾರ್ದಾ, ಚಿಪ್ಲುನ್, ಖೇಡ್, ಮಂಗಾವ್ ಮತ್ತು ರೋಹಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
ಈ ರೈಲಿನ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಗಾಗಿ www.enquiry.indianrail.gov.in ಭೇಟಿ ನೀಡಬೇಕು ಅಥವಾ NTES ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ಈ ರೈಲುಗಳಲ್ಲಿಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಕಡ್ಡಾಯವಾಗಿದೆ.